Shivamogga | ಜ.12 ಮತ್ತು 13ರಂದು ಮರ್ಕಜ್‌ ಸಆದಃ ಶಿಕ್ಷಣ ಸಂಸ್ಥೆಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮ

Shivamogga | ಜ.12 ಮತ್ತು 13ರಂದು ಮರ್ಕಜ್‌ ಸಆದಃ ಶಿಕ್ಷಣ ಸಂಸ್ಥೆಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮ

ಶಿವಮೊಗ್ಗದ ವಾದಿ ಎ ಹುದಾ ನಗರದ 5ನೇ ತಿರುವಿನಲ್ಲಿರುವ ಮರ್ಕಜ್‌ ಸಆದಃ ಶಿಕ್ಷಣ ಸಂಸ್ಥೆಯ ಕಲಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ.11, 12 ಹಾಗೂ 13ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್‌ ಲತೀಫ್ ಸಅದಿ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೌಕಿಕ ವಿದ್ಯಾಭ್ಯಾಸದೊಂದಿಗೆ ಧಾರ್ಮಿಕ ವಿದ್ಯಾಭ್ಯಾಸವನ್ನು ನೀಡಿ ಸಮಾಜದ ವಿದ್ಯಾರ್ಥಿಗಳನ್ನು ದೇಶದ ಹಿತ ಬಯಸುವ ಉನ್ನತ ಪ್ರಜೆಗಳನ್ನಾಗಿ ಬೆಳೆಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದರು.

ಸಂಸ್ಥೆಯಲ್ಲಿ 7ನೇ ತರಗತಿಯಿಂದ ಪದವಿವರೆಗೆ ಶಿಕ್ಷಣ ನೀಡುತ್ತಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿಶೇಷವಾಗಿ ಕನ್ನಡ ಭಾಷೆಗೆ ಸಂಪೂರ್ಣ ಆದ್ಯತೆ ನೀಡಿ, ಧಾರ್ಮಿಕ ಬೋಧನೆಗಳನ್ನು ಕನ್ನಡ ಭಾಷೆಯಲ್ಲಿ ನೀಡಿ ಕನ್ನಡದ ಮಹತ್ವ ಮತ್ತು ಗೌರವವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸುತ್ತಿರುವ ಸಂಸ್ಥೆಯು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.

ಜ.11ರ ಬೆಳಿಗ್ಗೆ 9ಗಂಟೆಗೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ಅಂದು ಮಾದಕ ದ್ರವ್ಯಗಳ ವಿರುದ್ಧದ ಜನ ಜಾಗೃತಿ ಅಭಿಯಾನಕ್ಕೆ ಸಂಸ್ಥೆಯ ವಿದ್ಯಾರ್ಥಿಗಳು ಚಾಲನೆ ನೀಡಲಿದ್ದಾರೆ ಎಂದರು.

ಜ.14ರಂದು ಸಂಜೆ 6 ಗಂಟೆಗೆ ಸಮ್ಮೇಳನ ನಡೆಯಲಿದೆ. ಇದೇ ವೇಳೆ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಅವರಿಗೆ ಎಕ್ಸಲೆನ್ಸಿ ಅವಾರ್ಡ್ ನೀಡಿ ಗೌರವಿಸಲಾಗುವುದು. ಸ್ಪೀಕರ್ ಯು.ಟಿ.ಖಾದರ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ, ಸಂಸದ ಬಿ. ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಗೋಪಾಲಕೃಷ್ಣ ಬೇಳೂರು, ಮುಖಂಡ ಎಂ. ಶ್ರೀಕಾಂತ್ ಭಾಗವಹಿಸಲಿದ್ದಾರೆ. ಸಂಸ್ಥೆಯ ಚೇರ್ಮನ್ ಸಮ್ಮಿ ಶಹೀದುದ್ದೀನ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಜಬ್ಬಾರ್ ಸಅದಿ, ಆಸಿಫ್ ರೋಶನ್, ಇರ್ಷಾದ್, ಅಕ್ಬರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *