ಬೇಟೆಗೆ ಬಂದವರಿಂದ ಹೊಲಕ್ಕೆ ಹೋಗಿದ್ದವರಿಗೆ ಗುಂಡೇಟು
ಸಾಗರ : ಹೊಲಕ್ಕೆ ನೀರು ಬಿಡಲು ಹೋದಾಗ ವ್ಯಕ್ತಿಯೊಬ್ಬರಿಗೆ ಗುಂಡೇಟು ತಗುಳಿ ಗಾಯಗೊಂಡಿರುವ ಘಟನೆ ಮಾಲ್ವೆ ಗ್ರಾಮದಲ್ಲಿ ನಡೆದಿದೆ.
ಶುಂಠಿ ಬೆಳೆಗೆ ನೀರು ಬಿಡಲು ಹೊಲಕ್ಕೆ ಹೋಗಿದ್ದ ಸಮಯದಲ್ಲಿ ಪಕ್ಕದ ಗುಡಿಸಲಿನ ಎದುರು ನಿಂತಿದ್ದ ವ್ಯಕ್ತಿಗೆ ಬೇಟೆಗೆ ಬಂದಿದ್ದ ಅಪರಿಚಿತರು ಗುಂಡು ಹೊಡೆದು ಕಾಲಿಗೆ ಗಾಯ ಮಾಡಿದ್ದಾರೆ ಎಂದು ಹೇಳಲಾಗುತಿದೆ. ಗಾಯಗೊಂಡಿರುವ ರವಿಯನ್ನು ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಲ್ವೆ ಗ್ರಾಮದ ಬಿಂದುರವರು ಸ್ನೇಹಿತ ರವಿಯೊಂದಿಗೆ ಹೊಲಕ್ಕೆ ಸಂಜೆ ವೇಳೆಯಲ್ಲಿ ನೀರು ಬಿಡಲು ಹೋಗಿದ್ದರು. ಬಿಂದು ಹೊಲದಲ್ಲಿ ನೀರಿನ ಪೈಪ್ ಸರಿ ಮಾಡುತ್ತಿದ್ದಾಗ ಗುಂಡಿನ ಸದ್ದು ಕೇಳಿ ಬಂದಿದ್ದಲ್ಲದೆ, ಗುಡಿಸಲಿನ ಪಕ್ಕದಲ್ಲಿ ನಿಂತಿದ್ದ ರವಿ ಗಾಯಗೊಂಡು ಕೂಗಿಕೊಂಡಿದ್ದಾರೆ. ತಕ್ಷಣ ಬಂದು ನೋಡಿದಾಗ ರವಿಯ ಕಾಲಿಗೆ ತೀವ್ರವಾದ ಗಾಯವಾಗಿದೆ.
ತಕ್ಷಣ ಸ್ಥಳೀಯರಾದ ದೇವರಾಜ್ ಹಾಗೂ ರವಿ ಅಣ್ಣ ತೇಜು ಸಹಾಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ರವಿ ಪ್ರಾಣಾಪಾಯದಿಂದ ಪಾರಾಗಿದ್ದು, ಎಡತೊಡೆಗೆ ತೀವ್ರವಾದ ಗಾಯವಾಗಿದ್ದು, ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಾಡು ಪ್ರಾಣಿಗಳ ಬೇಟೆಗೆ ಬಂದಿದ್ದ ಅಪರಿಚಿತರು ರವಿಗೆ ಗುಂಡು ಹೊಡೆದು ಕತ್ತಲಿನಲ್ಲಿ ಪರಾರಿಯಾಗಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ಬಿಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆದಿದೆ.