HOSANAGARA | ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ – ಯಾರಾಗ್ತಾರೆ ಹೊಸನಗರದ ಕಮಲ ಸಾರಥಿ?
ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯಾದ ಬೆನ್ನಲ್ಲೇ ಜಿಲ್ಲಾ, ತಾಲ್ಲೂಕು ಬಿಜೆಪಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಈಗಾಗಲೇ ಹೊಸನಗರ ತಾಲ್ಲೂಕು ಅಧ್ಯಕ್ಷರ ಗದ್ದುಗೆಗೆ ವೀರೇಶ್ ಆಲುವಳ್ಳಿ,ಎಂ ಬಿ ಮಂಜುನಾಥ್ ಸೇರಿದಂತೆ ನಾಲ್ವರ ಹೆಸರು ಮುನ್ನಲೆಗೆ ಬರುತ್ತಿದೆ ಎನ್ನಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಲೋಕಸಭಾ, ಜಿಪಂ ಮತ್ತು ತಾಪಂ ಚುನಾವಣೆ ಇರುವುದರಿಂದ ನೂತನ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಕ್ರಿಯಾಶೀಲ ಮತ್ತು ಪ್ರಬಲರನ್ನೇ ಆಯ್ಕೆ ಮಾಡುವ ಎಲ್ಲ ಸಾಧ್ಯತೆ ಇದೆ. ಆ ಹಿನ್ನಲೆಯಲ್ಲಿ ಸಂಘಟನ ಚತುರ ವ್ಯಕ್ತಿಗೆ ಪಟ್ಟ ಕಟ್ಟುವ ಇಂಗಿತವನ್ನು ಜಿಲ್ಲಾ ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಅಧ್ಯಕ್ಷಗಾದಿ ರೇಸ್ ನಲ್ಲಿ ವೀರೇಶ್ ಆಲುವಳ್ಳಿ, ಜಿಪಂ ಮಾಜಿ ಸದಸ್ಯ ,ಮಾಜಿ ಶಾಸಕ ಸ್ವಾಮಿರಾವ್ ರವರ ಪುತ್ರ ಸುರೇಶ್ ಸ್ವಾಮಿರಾವ್ ಹಾಗೂ ಕೆರೆಹಳ್ಳಿ-ಹುಂಚ ಬಿಜೆಪಿ ಮಹಾಶಕ್ತಿ ಕೆಂದ್ರದ ಅಧ್ಯಕ್ಷ ಹಾಗೂ ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗಿರುವ ಎಂ ಬಿ ಮಂಜುನಾಥ್ ಹಾಗೂ ಪಕ್ಷದ ಹೊಸನಗರ ಭಾಗದ ಮುಖಂಡ ,ಪಪಂ ಮಾಜಿ ಅಧ್ಯಕ್ಷ ಎಂ ಎನ್ ಸುಧಾಕರ್ ಹೆಸರು ಕೂಡ ಕೇಳಿ ಬರುತ್ತಿದೆ.
ವೀರೇಶ್ ಆಲುವಳ್ಳಿ ಕೆಂಚನಾಲ ಗ್ರಾಪಂ ಸದಸ್ಯರಾಗಿ ನಂತರದಲ್ಲಿ ಅರಸಾಳು ತಾಪಂ ಸದಸ್ಯರಾಗಿ ಆಯ್ಕೆಯಾಗಿ ಹೊಸನಗರ ತಾಪಂ ಅಧ್ಯಕ್ಷಗಾದಿ ಕೈತಪ್ಪಿತ್ತು ನಂತರ ನಡೆದ ರಾಜಕೀಯ ಮೇಲಾಟದಲ್ಲಿ ಮೀಸಲಾತಿಯಿಂದ ಕ್ಷೇತ್ರ ಕಳೆದುಕೊಂಡ ವೀರೇಶ್ ಆಲುವಳ್ಳಿ ಹೊಸ ಕ್ಷೇತ್ರವಾದ ಹುಂಚ ತಾಪಂ ಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ಅ ನಂತರದಲ್ಲಿ ತಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದರು. ಈಗ ಅಧಿಕಾರವಿಲ್ಲದೇ ಎರಡೂವರೆ ವರ್ಷ ಕಳೆದರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ವೀರೇಶ್ ಆಲುವಳ್ಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರೊಂದಿಗೆ ಮತ್ತು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಜೊತೆಗಿರುವ ನಿಕಟ ಸಂಪರ್ಕವೇ ಪ್ಲಸ್ ಪಾಯಿಂಟ್ ಎನ್ನಲಾಗುತ್ತಿದೆ.
ಹೊಸನಗರ ತಾಲೂಕಿನ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಹಾಗೂ ಕಳೆದ ಐದು ವರ್ಷಗಳಿಂದ ಕೆರೆಹಳ್ಳಿ- ಹುಂಚ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸಂಘಟನೆಯಲ್ಲಿ ಸೈ ಎನಿಸಿಕೊಂಡಿರುವ ಹಾಗೂ ಸಂಸದ ಬಿ ವೈ ರಾಘವೇಂದ್ರ ರವರ ರಿಪ್ಪನ್‌ಪೇಟೆ ಭಾಗದ ನೀಲಿಗಣ್ಣಿನ ಮುಖಂಡರಾಗಿ ಗುರುತಿಸಿಕೊಂಡಿರುವ ಹಾಗೂ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ರವರಿಗೆ ಆಪ್ತರಾಗಿರುವ ಎಂ ಬಿ ಮಂಜುನಾಥ್ ತನ್ನದೇ ಆದ ವಿಭಿನ್ನ ತಂತ್ರಗಾರಿಕೆಯಲ್ಲಿ ಅಧ್ಯಕ್ಷ ಹುದ್ದೆಗೆ ಟವೆಲ್ ಹಾಕಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಈಡಿಗ ಸಮಾಜದ ಪ್ರಭಾವಿ ಸುರೇಶ್ ಸ್ವಾಮಿರಾವ್ ರೇಸ್ ನಲ್ಲಿದ್ದು ಅಧ್ಯಕ್ಷಗಾದಿ ಒಲಿದರೆ ನಿಭಾಯಿಸುವೆ ಎಂಬ ಆತ್ಮ ವಿಶ್ವಾಸದಲ್ಲಿದ್ದೂ ಹಿರಿಯ ಮುತ್ಸದಿ, ಮಾಜಿ ಶಾಸಕ ಸ್ವಾಮಿರಾವ್ ಶ್ರೀರಕ್ಷೆಯೇ ಬೋನಸ್ ಪಾಯಿಂಟ್ ಎನ್ನಲಾಗುತ್ತಿದೆ.
ಹೊಸನಗರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ಜಿಲ್ಲಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ಎಂ ಎನ್ ಸುಧಾಕರ್ ಕೂಡ ರೇಸ್ ನಲ್ಲಿದ್ದೂ ಯಾರು ಹೊಸನಗರದ ಕಮಲ ಸಾರಥಿಯಾಗುತ್ತಾರೋ ಕಾದುನೋಡಬೇಕಾಗಿದೆ….