Hosanagara |ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟ – ಮನೆ ಸಂಪೂರ್ಣ ಬೆಂಕಿಗಾಹುತಿ : ಗ್ಯಾಸ್ ಸಿಲಿಂಡರ್ ಏಜೆನ್ಸಿ ವಿರುದ್ದ ಕ್ರಮಕ್ಕೆ ಆಗ್ರಹ
ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಶಿಕ್ಷಕರಾದ ಬಸವನಾಯ್ಕ ಎಂಬುವವರಿಗೆ ಸೇರಿದ ಮನೆ ಬೆಂಕಿಗಾಹುತಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಜೇನಿ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ಗ್ರಾಮದ ಭೀಮನಕೆರೆಯಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.
ಶನಿವಾರ ಸಂಜೆ ಹೊಸನಗರದ ಬಾಲಾಜಿ ಇಂಡೇನ್ ಗ್ಯಾಸ್ ಏಜೆನ್ಸಿಯಿಂದ ಸರಬರಾಜಾದ ಸಿಲಿಂಡರ್ ಅನ್ನು ಭಾನುವಾರ ಬೆಳಗ್ಗೆ 8:30 ರ ಸುಮಾರಿಗೆ ರೆಗ್ಯುಲೇಟರ್ ಅಳವಡಿಸುವಾಗ ಅನಿಲ ಸೋರಿಕೆಯಾಗಿದ್ದು ನಂತರ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದೆ.
ಇಂಡೇನ್ ಕಂಪನಿಗೆ ಸೇರಿದ ಸಿಲಿಂಡರ್ ಇದಾಗಿದ್ದು ವಿತರಕರು ಅವಧಿ ಮೀರಿದ ಸಿಲಿಂಡರ್ (D 23 ಎಂದು ಸಿಲಿಂಡರ್ ಮೇಲೆ ನಮೂದಾಗಿದೆ) ವಿತರಣೆ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಪೋಟದ ತೀವ್ರತೆಗೆ ಮನೆಯ ಕಿಟಕಿ, ಬಾಗಿಲುಗಳು ಛಿದ್ರಗೊಂಡಿವೆ. ಮನೆ ಮೇಲ್ಛಾವಣಿ ಸಂಪೂರ್ಣ ಸುಟ್ಟು ಹೋಗಿದ್ದು ಮನೆಯೊಳಗೆ ಸಂಗ್ರಹಿಸಿಡಲಾದ ಅಡಿಕೆ, ಧವಸ ಧಾನ್ಯಗಳು, ಟಿವಿ, ರೆಫ್ರಿಜರೇಟರ್ ಮತ್ತು ಇನ್ನಿತರ ವಿದ್ಯುತ್ ಉಪಕರಣಗಳು ಬೆಂಕಿಗೆ ಸಂಪೂರ್ಣ ಆಹುತಿಯಾಗಿ ಸುಮಾರು 10 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದು ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಬಾಲಾಜಿ ಇಂಡೇನ್ ಗ್ಯಾಸ್ ಏಜೆನ್ಸಿ ಜಗದೀಶ್ ಮತ್ತು ವಿತರಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.