Headlines

Sagara | ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಸಾಗರ ಪತ್ರಕರ್ತರಿಂದ ಪ್ರತಿಭಟನೆ

Sagara | ಉಸ್ತುವಾರಿ ಸಚಿವ ಮಧುಬಂಗಾರಪ್ಪ ವಿರುದ್ದ ಸಾಗರ ಪತ್ರಕರ್ತರಿಂದ ಪ್ರತಿಭಟನೆ
ಸಾಗರ : ಪತ್ರಕರ್ತರ ಆತ್ಮಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ ವಾರ್ತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ರವರ ನಡೆಯನ್ನು ಖಂಡಿಸಿ ಸಾಗರದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಉಪ ವಿಭಾಗಾಧಿಕಾರಿಗಳ ಕಛೇರಿಯ ಎದುರು ಪತ್ರಕರ್ತರು ಕಪು ಬಟ್ಟೆ ಕಟ್ಟಿಕೊಂಡು ಸಚಿವರು ಹಾಗೂ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಡಿ. ಒಂದರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ತಾಲೂಕಿನ ಬರ ಪರಿಶೀಲನೆ ಹಾಗೂ ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ತಾಲೂಕು ಅಧಿಕಾರಗಳ ಸಭೆ ನಡೆಸಿದರೂ ಇಲ್ಲಿನ ಪತ್ರಕರ್ತರಿಗೆ ಸಭೆಯ ಆಹ್ವಾನ ನೀಡಿರಲಿಲ್ಲ. ಆದರೆ ಜನಹಿತಕ್ಕಾಗಿ ಪತ್ರಕರ್ತರು ವರದಿಗಾಗಿ ಸಭೆಯ ಸ್ಥಳಕ್ಕೆ ಹೋಗಿದ್ದು ಜಿಲ್ಲೆಯ ಸಮಸ್ಯೆಗಳು ಮತ್ತು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಚಿವ ಮಧು ಬಂಗಾರಪ್ಪ ಉದ್ಧಟತನದಿಂದ ವರ್ತಿಸಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಸಮಚಿತ್ತದಿಂದ ಸಮಜಾಯಿಷಿ ನೀಡುವಷ್ಟು ಸಹನೆ ಇಲ್ಲದೆ ಸಚಿವರು ಪತ್ರಕರ್ತರನ್ನು ಹಿಯಾಳಿಸಿ ಅವಮಾನಿಸಿದ್ದಾರೆ. ಸಚಿವರ ವರ್ತನೆ ಪ್ರಜಾಸತ್ತಾತ್ಮಕ ನಡವಳಿಕೆಗಳಿಗೆ ವಿರುದ್ಧವಾಗಿದ್ದು ಸಂಘ ಖಂಡಿಸುತ್ತದೆ ಎಂದರು.

ಸಚಿವರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಮಾರುತಿ ತೀವ್ರ ಬೇಜವಾಬ್ದಾರಿ ತೋರಿಸಿದ್ದಾರೆ. ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಯ ಅಧಿಕೃತ ಕಾರ್ಡ್ ಹೊಂದಿದ ಪ್ರಮುಖ ಪತ್ರಕರ್ತರನ್ನು ಅವಮಾನಿಸಿದ್ದಾರೆ. ಅವರನ್ನು ತತ್ ಕ್ಷಣ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಹಿರಿಯ ಪತ್ರಕರ್ತ ಅಖಿಲೇಶ್ ಚಿಪ್ಳಿ ಮಾತನಾಡಿ, ಪತ್ರಕರ್ತರು ಸಾಗರ ಹಿತ ಕಾಯುವ ದೃಷ್ಟಿಯಿಂದ ಪ್ರಶ್ನೆ ಕೇಳುತ್ತಾರೆ. ಸಾಗರ ತಾಲೂಕಿನ ಸಮಸ್ಯೆ ಪತ್ರಕರ್ತರಿಗೆ ಗೊತ್ತಿರುತ್ತದೆ. ಇಂತಹ ಪತ್ರಕರ್ತರು ಸಚಿವರಿಗೆ ಪ್ರಶ್ನೆ ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಚಿವರ ವಿರುದ್ಧ ಮತ್ತಷ್ಟು ಪ್ರತಿಭಟನೆಯನ್ನು ರಾಜ್ಯಾದ್ಯಂತ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಎಂ.ಜಿ.ರಾಘವನ್ ಮನವಿ ಪತ್ರ ವಾಚಿಸಿದರು. ಸಂಘದ ಉಪಾಧ್ಯಕ್ಷ ರವಿನಾಯ್ಡು, ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗಡೆ, ಪತ್ರಕರ್ತರಾದ ಎಂ.ರಾಘವೇಂದ್ರ, ರಾಘವೇಂದ್ರ ಶರ್ಮ, ವಸಂತ ನೀಚಡಿ, ಮ.ಸ.ನಂಜುಂಡಸ್ವಾಮಿ, ಉಮೇಶ್ ಮೊಗವೀರ, ನಾಗರಾಜ್, ಶಿವಕುಮಾರ್ ಗೌಡ, ಜಗನ್ನಾಥ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *