POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ – ಶಾಸಕ ಬೇಳೂರು ಕಿಡಿ | GKB

ಸಚಿವ ಮಧು ಬಂಗಾರಪ್ಪಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ – ಶಾಸಕ ಬೇಳೂರು ಕಿಡಿ
ಸಚಿವ ಮಧು ಬಂಗಾರಪ್ಪ ರವರಿಗೆ ಅಹಂ ಜಾಸ್ತಿ ಆಗಿ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ಎಲ್ಲಾ ಉಸ್ತುವಾರಿ ಸಚಿವರು ಸರಿ ಇದ್ದಾರೆ ಆದರೆ ನಮ್ಮ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ ಆಗಿದೆ‌. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ನಾವು ಶಾಸಕರಲ್ವಾ? ನಮಗೂ ಜವಾಬ್ದಾರಿ ಇಲ್ವಾ ಎಂದು ಪ್ರಶ್ನಿಸಿದರು. 

ನಾವೂ ಯಡಿಯೂರಪ್ಪನ ಮಕ್ಕಳನ್ನು ಸೋಲಿಸಬೇಕು ಅಂತಾ ಇದ್ದೇವೆ. ರಾಘವೇಂದ್ರನ ಸೋಲಿಸಬೇಕು ಎಂದು ಇದ್ದೇವೆ. ಆದರೆ ನಮ್ಮ ಸಚಿವರು ನಮ್ಮಲ್ಲೇ ಒಡಕು ಮೂಡಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ ಶಾಸಕ ಬೇಳೂರು ಗೋಪಾಲಕೃಷ್ಣ, ಮಧು ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಮಗ. ಅವರ ತಂದೆಯ ಗರಡಿಯಲ್ಲಿ ಪಳಗಿದವರು ನಾವು. ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗಬೇಕು. ಅವರೇ ಪಕ್ಷವನ್ನು ಒಡೆಯುವುದಲ್ಲ ಎಂದು ಕಿಡಿಕಾರಿದರು.

ಇನ್ನು, ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಒಡೆದು ಎರಡು ಬಣವಾಗಿದೆ ಎಂದ ಶಾಸಕ ಬೇಳೂರು, ಅವರೇ ಅದಕ್ಕೆ ಕುಮ್ಮಕ್ಕು ನೀಡುವುದಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನೂ ಒಬ್ಬ ಪ್ರಬಲ ಆಕಾಂಕ್ಷಿ ಎಂದರು.

ಮಾಜಿ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧವೂ ಹರಿಹಾಯ್ದ ಬೇಳೂರು, ಈಶ್ವರಪ್ಪ ಅವರದ್ದು ಹರಕು ನಾಲಗೆ. ಅವರ ಬಗ್ಗೆ ಮಾತನಾಡಲು ಹೇಸಿಗೆ ಅನಿಸುತ್ತದೆ. ಅಸಹ್ಯವಾಗುತ್ತದೆ. ಈಶ್ವರಪ್ಪ ಒಬ್ಬ ಹಿರಿಯ ನಾಯಕ. ಅವರ ಮೇಲೂ ಕೇಸುಗಳು ಇಲ್ವಾ? ಅವರು ಜೈಲಿಗೆ ಹೋಗ್ತಾರಾ? ಈಶ್ವರಪ್ಪನಂತಹ ಹೇಸಿಗೆ ಮನುಷ್ಯನ ಬಗ್ಗೆ ಹೇಳಲ್ಲ. ಹೇಳಲು ಅಸಹ್ಯವಾಗುತ್ತದೆ ಎಂದು ಕಿಡಿಕಾರಿದರು.

ಇನ್ನು, ಬಿಜೆಪಿ (BJP) ನಾಯಕರು 3 ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎನ್ನುತ್ತಾರೆ. ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಯಡಿಯೂರಪ್ಪ ಅವತ್ತು ಚುನಾವಣೆಯಲ್ಲಿ ಮಿಷನ್ 150 ಅಂದರು. ಬಿಜೆಪಿ 65 ಸ್ಥಾನಕ್ಕೆ ಬಂತು. ಈಗ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನುತ್ತಾರೆ. ಯಾಕೆ ಅವರ ಮಗ ಅಧ್ಯಕ್ಷರಾದ ಕೂಡಲೇ ಪಕ್ಷ ಆಧಿಕಾರಕ್ಕೆ ಬರುತ್ತಾ? ಹಾಗಾದರೆ ಅವತ್ತು ಯಾಕೆ ಬರಲಿಲ್ಲ? ಹಾಗಾದರೆ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಮೋಸ ಮಾಡಿದ್ರಾ ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.