ಬ್ಯಾಂಕ್ ಲೋನ್ ನೀಡುವವರು ಎಂದು ಮನೆಗೆ ನುಗ್ಗಿ ದರೋಡೆ – ಇಬ್ಬರ ಬಂಧನ | Robbery
ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆಯೊಂದಕ್ಕೆ ನುಗ್ಗಿ ವ್ಯಕ್ತಿಯೊಬ್ಬನ ಮೊಬೈಲ್ ಹಾಗೂ ಹಣ ಮತ್ತು ಆಭರಣ ಕಿತ್ತುಕೊಂಡು ಹೋಗಿರುವ ಕೇಸ್ವೊಂದು ದಾಖಲಾಗಿತ್ತು. ಬ್ಯಾಂಕ್ ಲೋನ್ ನೀಡುವವರು ಎಂದು ಹೇಳಿಕೊಂಡು ಒಳಕ್ಕೆ ನುಗ್ಗಿದ್ದ ಆರೋಪಿಗಳು ಈ ಕೃತ್ಯವೆಸಗಿದ್ದರು. ಸದ್ಯ ಪ್ರಕರಣವನ್ನು ಹೊಳೆಹೊನ್ನೂರು ಪೊಲೀಸರು ಭೇದಿಸಿದ್ದಾರೆ.
ದಿನಾಂಕ: 11-12-2023 ರಂದು ಹೊಳೆಹೊನ್ನೊರು ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಬೀ ಬೀರನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅಪರಿಚಿತರು ನುಗ್ಗಿ ಆತನ ಮೇಲೆ ಹಲ್ಲೆ ಮಾಡಿ ನಗದು, ಬಂಗಾರದ ಆಭರಣ ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿರುತ್ತರೆಂದು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ಗುನ್ನೆ ಸಂಖ್ಯೆ 0367/2023 ಕಲಂ 394 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.
ಈ ಕೇಸ್ನ ಸಂಬಂಧ ಹೊಳೆಹೊನ್ನೂರು ಠಾಣಾ ಪೊಲೀಸ್ ನಿರೀಕ್ಷಕರಾದ ಆರ್ ಎಲ್ ಲಕ್ಷ್ಮೀಪತಿ ರವರ ನೇತೃತ್ವದಲ್ಲಿ, ಚಂದ್ರಶೇಖರ ಪಿ.ಎಸ್.ಐ ರಮೇಶ ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಹೆಚ್. ಸಿ ಲಿಂಗೇಗೌಡ, ಮಂಜುನಾಥ, ಕುಮಾರ,ಪ್ರಸನ್ನ, ಮತ್ತು ಪಿಸಿ ವಿಶ್ವನಾಥ, ಚಂದ್ರಶೇಖರ್ ಮತ್ತು ಪ್ರಮೋದ ರವರನ್ನೊಳಗೊಂಡ ತನಿಖಾ ತಂಡವನ್ನು ರಚನೆಯಾಗಿತ್ತು.
ಸದ್ಯ ತನಿಖಾ ತಂಡವು ದಿನಾಂಕ: 21-12-2023 ರಂದು ಪ್ರಕರಣದ ಆರೋಪಿತರಾದ 1)ದರ್ಶನ್ ಪಿ @ ದರ್ಶಿ, 22 ವರ್ಷ, ಹಳೇ ಭಂಡಾರಹಳ್ಳಿ ಭದ್ರಾವತಿ ಮತ್ತು 2) ವಿಜಯ @ವಿಜಿ, 23 ವರ್ಷ, ಹಳೇ ಭಂಡಾರಹಳ್ಳಿ ಭದ್ರಾವತಿ ರವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 15000/- ರೂ ಗಳ 3 ಗ್ರಾಂ ಬಂಗಾರದ ಆಭರಣವನ್ನು ಅಮಾನತ್ತು ಪಡಿಸಿಕೊಂಡಿದೆ.