ಪ್ರಾಣಿಗಳ ದಾಳಿಯಿಂದ ಅಸ್ವಸ್ಥ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತಿದ್ದ ಅಪರೂಪದ ಚಿರತೆ ಬೆಕ್ಕನ್ನು(Leopard cat)ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಹೊಸನಗರ ತಾಲೂಕಿನ ಪುರಪ್ಪೆಮನೆ ಬಳಿ ನಡೆದಿದೆ.
ಚಿರತೆ ಬೆಕ್ಕು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ಜಾತಿಗಳಲ್ಲಿ ಒಂದಾಗಿದೆ. ಪುರಪ್ಪೆ ಮನೆ – ಗಡಿಕಟ್ಟೆ ಮಾರ್ಗ ಮಧ್ಯದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಜೀವನ್ಮರಣ ಹೋರಾಟದಲ್ಲಿದ್ದ ಚಿರತೆ ಬೆಕ್ಕು ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿತ್ತು. ಚಿರತೆಯಂತೆ ಕಾಣಿಸುವ ಬೆಕ್ಕನ್ನು ಕಂಡ ಸ್ಥಳೀಯರು ಭಯಭೀತರಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ತೆರಳಿದ ಹೊಸನಗರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ ಹಾಗೂ ಸಿಬ್ಬಂದಿಗಳ ತಂಡ ಚಿರತೆ ಬೆಕ್ಕನ್ನು ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿರುವ ವನ್ಯಜೀವಿಗಳ ಆರೈಕೆ ಕೇಂದ್ರಕ್ಕೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಎಂ ರಾಘವೇಂದ್ರ ಚಿರತೆ ಬೆಕ್ಕು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುತ್ತದೆ ಮತ್ತು ಇದರ ಜೀವಿತಾವಧಿ ಏಳರಿಂದ ಎಂಟು ವರ್ಷಗಳು. ಚಿರತೆ ಬೆಕ್ಕು ಕಾಡಿನ ಕೋಳಿ, ಮೊಲಗಳು, ಅಳಿಲುಗಳು ಮತ್ತು ಕೆಲವು ಪಕ್ಷಿಗಳನ್ನು ಬೇಟೆಯಾಡುತ್ತದೆ. ಇದು ಮರಗಳ ಮೇಲೆ ವಾಸಿಸುತ್ತದೆ,ವಿನಾಶದ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಚಿರತೆ ಬೆಕ್ಕು ಸೇರಿದೆ ಎಂದರು.
ಈ ಸಂಧರ್ಭದಲ್ಲಿ ಉಪ ವಲಯರಣ್ಯಾಧಿಕಾರಿ ದೊಡ್ಡಮನಿ ಸಿಬ್ಬಂದಿಗಳಾದ ರಾಜು ,ಕೃಷ್ಣಮೂರ್ತಿ ಹಾಗೂ ಜಗದೀಶ್ ಇದ್ದರು.