ತೀರ್ಥಹಳ್ಳಿ : ಪ್ರಾಣಿ, ಪಕ್ಷಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಆದರೆ ತೀರ್ಥಹಳ್ಳಿಯ ಕಾಳಿಂಗ ಫೌಂಡೇಷನ್ ಸದಸ್ಯರು ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಆಪರೇಷನ್ ನಡೆಸಿ ಆರೋಗ್ಯ ಸುಧಾರಿಸಿದ ಮೇಲೆ ಕಾಡಿಗೆ ಬಿಟ್ಟಿದ್ದಾರೆ.
ತೀರ್ಥಹಳ್ಳಿಯ ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿಯುತ್ತಿದಂತೆ ಕಾಳಿಂಗ ಫೌಂಡೇಶನ್ ಸದಸ್ಯರು ಭೇಟಿ ನೀಡಿದ್ದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ. ನಂತರ ಹಾವನ್ನು ಹಿಡಿದು ಮೇಗರವಳ್ಳಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಮರು ದಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಪಶುವೈದ್ಯ ಯುವರಾಜ ಹೆಗಡೆ ಅನಸ್ತೇಷಿಯ ನೀಡಿ ಶಸ್ತ್ರಚಿಕಿತ್ಸೆ ನಡೆಸಿ ಗಾಯಗೊಂಡ ಜಾಗಕ್ಕೆ ಹೊಲಿಗೆ ಹಾಕಿದ್ದಾರೆ. ನಂತರ ಕಾಳಿಂಗ ಫೌಂಡೇಶನ್ ಕಟ್ಟಡದಲ್ಲಿಯೇ ಆರೈಕೆ ಮಾಡಲಾಗಿದೆ. ಗಾಯ ಮಾಗುವ ತನಕ ಆರೈಕೆ ಮಾಡಿ ನಂತರ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಗಿದೆ.
ಆಗುಂಬೆ ಸಮೀಪದ ಗುಡ್ಡೇಕೇರಿಯಲ್ಲಿ ಇರುವ ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿ ಎಂಬ ಸಂಸ್ಥೆಯು ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ, ಸಂಶೋಧನೆ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.