ಹೊಸನಗರ : ಕಾಲೇಜು ಉಪನ್ಯಾಸಕರೊಬ್ಬರ ಮನೆಯ ಕಾಂಪೌಂಡ್ ಆವರಣಕ್ಕೆ ಸಮಾರು 15 ಜನರ ಗುಂಪು ಅತಿಕ್ರಮಣ ಪ್ರವೇಶ ಮಾಡಿ, ಬೆದರಿಕೆ ಹಾಕಿದ ಘಟನೆ ಪಟ್ಟಣದ ಕ್ರಿಸ್ಟಿಯನ್ ಕಾಲೋನಿಯಲ್ಲಿ ನಡೆದಿದೆ.
ಇಲ್ಲಿನ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಜನ್‌ಕುಮಾರ್ ಎಂಬವವರಿದ್ದ ಬಾಡಿಗೆ ಮನೆಯ ಆವರಣಕ್ಕೆ ಶನಿವಾರ ತಡರಾತ್ರಿ ಪ್ರವೇಶಿಸಿ, ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾರೆ. ಮನೆ ಒಳಗಡೆ ಅನ್ಯಕೋಮಿನ ಮಹಿಳೆಯನ್ನು ಇರಿಸಿಕೊಂಡಿದ್ದೀಯ, ನಾವು ತಪಾಸಣೆ ಮಾಡಬೇಕು. ಬಾಗಿಲು ತೆಗೆಯದಿದ್ದರೆ, ಬಾಗಿಲು ಒಡೆದು ಒಳ ಪ್ರವೇಶಿಸುವುದಾಗಿ ತಿಳಿಸಿ ಜೀವ ಬೆದರಿಕೆ ಹಾಕಿದ್ದಾರೆ.
ವಿಷಯ ತಿಳಿದು ಪೊಲೀಸರು ಹಾಗೂ ಮನೆಯ ಮಾಲಿಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಅನೈತಿಕ ಚಟುವಟಿಕೆ ಕಂಡು ಬಾರದ ಹಿನ್ನೆಲೆಯಲ್ಲಿ ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಯುವಕರ ಗುಂಪಿಗೆ ಬುದ್ದಿ ಹೇಳಿದ್ದಾರೆ.
ಅಂಜನ್‌ಕುಮಾರ್ ನೀಡಿರುವ ದೂರಿನ ಮೇರೆಗೆ ಪಟ್ಟಣದ ನಿವಾಸಿ ಮಂಜುನಾಥ್ ಶೆಟ್ಟಿ ಹಾಗೂ ಇತರರ ವಿರುದ್ಧ ಐಪಿಸಿ 1860 (143,447,504,506,149) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.