ರಿಪ್ಪನ್‌ಪೇಟೆ : ಯುವ ಜನತೆಗೆ ನೇತ್ರದಾನದ ಅರಿವು ಮೂಡಿಸಬೇಕಿದೆ – ಡಾ|| ಬೃಂದಾ ನಾಯ್ಕ್|137 ವಿದ್ಯಾರ್ಥಿಗಳಿಂದ ನೇತ್ರದಾನಕ್ಕೆ ನೋಂದಣಿ
ರಿಪ್ಪನ್‌ಪೇಟೆ : ವ್ಯಕ್ತಿಯ ಮರಣಾನಂತರ ಆರೋಗ್ಯಯುತ ಕಣ್ಣುಗಳು ಇಬ್ಬರು ಅಂಧರ ಪಾಲಿಗೆ ಬೆಳಕಾಗುತ್ತವೆ. ಪ್ರಾಣಬಿಟ್ಟು ಆರು ಗಂಟೆಗಳೊಳಗಾಗಿ ನೇತ್ರಗಳನ್ನು ಸುರಕ್ಷಿತವಾಗಿ ಶೇಖರಿಸಲು ಸಾಧ್ಯವಾದಲ್ಲಿ ನೇತ್ರ ಚಿಕಿತ್ಸೆಯ ಮೂಲಕ ಅಂಧರಿಗೆ ದೃಷ್ಟಿಭಾಗ್ಯ ಲಭಿಸುತ್ತದೆ. ಅದಕ್ಕಾಗಿ ನೇತ್ರದಾನದ ಅರಿವನ್ನು ವಿಶೇಷವಾಗಿ ಯುವಜನತೆಗೆ ಮೂಡಿಸುವ ಅಗತ್ಯವಿದೆ ಎಂದು ಶಿವಮೊಗ್ಗದ ಹರಕೆರೆ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಡಾ|| ಬೃಂದಾ ನಾಯ್ಕ್ ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಿಪ್ಪನ್ ಪೇಟೆಯ ಯುವ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾಯೋಜನೆ, ಮತ್ತು ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಉಚಿತ ನೇತ್ರ ತಪಾಸಣೆ ಮತ್ತು ನೇತ್ರದಾನ ಪ್ರತಿಜ್ಞಾ ಶಿಬಿರ’ದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು ಕಣ್ಣಿನ ಆರೋಗ್ಯದ ಕುರಿತಾಗಿಯೂ ಕಾಳಜಿವಹಿಸಬೇಕೆಂದು ಕರೆ ನೀಡಿದರು.
ಶಂಕರ ಕಣ್ಣಿನ ಆಸ್ಪತ್ರೆಯ ಪ್ರದೀಪ. ಆರ್. ಎಸ್. ಅವರು ಕಣ್ಣಿನ ಚಿಕಿತ್ಸೆಯ ವಿಧಾನಗಳು ಮತ್ತು ಶಂಕರ್ ಆಸ್ಪತ್ರೆಯಲ್ಲಿನ ಸೌಲಭ್ಯಗಳಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ. ಟಿ. ವಹಿಸಿದ್ದರು. ಡಾ. ಎಚ್. ಎಸ್. ವಿರೂಪಾಕ್ಷಪ್ಪ, ನರೇಂದ್ರ ಕುಳಗಟ್ಟೆ. ಎಂ. ಆರ್, ಹರ್ಷ ಕುಮಾರ್ ಕೆ. ಆರ್, ದೇವರಾಜ್ ಆರ್, ಶಿಲ್ಪಾ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಸಾರ್ವಜನಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಲಾಯಿತು. 189 ಜನರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಮಾರ್ಗದರ್ಶನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ೧೩೭ ಜನ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡರು.