ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ|TRK

ರಾಜಕಾರಣಿ ಹಾಗೂ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಅರೆಬೆತ್ತಲೆಯಾಗಿ ಉದ್ಘಾಟಿಸಿದ ಹೋರಾಟಗಾರ ಟಿ ಆರ್ ಕೃಷ್ಣಪ್ಪ

ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಗೈರಿನಲ್ಲಿ ಸರ್ಕಾರಿ ಯೋಗ ಮಂದಿರವನ್ನು ಜನಪರ ಹೋರಾಟಗಾರನೊಬ್ಬ ಅರೆ ಬೆತ್ತಲೆಯಾಗಿ ಉದ್ಘಾಟನೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ನಡೆದಿದೆ.


ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿತಿ ಕೇಂದ್ರದವರು ಅನುಷ್ಟಾನಗೊಳಿಸಿದ 6 ಲಕ್ಷ ವೆಚ್ಚದ ಯೋಗ ಮಂದಿರವನ್ನು ಸಾಮಾಜಿಕ ಹೋರಾಟಗಾರ ಟಿ ಆರ್ ಕೃಷ್ಣಪ್ಪ ಅರೆ ಬೆತ್ತಲೆಯಾಗಿ ಉದ್ಘಾಟಿಸಿದರು.ನಂತರ ಸಾರ್ವಜನಿಕರೊಂದಿಗೆ ಕೆಲ ಹೊತ್ತು ಯೋಗಾಭ್ಯಾಸ ಮಾಡಿದರು.


ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಸರ್ಕಾರದ ಅನುದಾನದಿಂದ ನಿರ್ಮಾಣಗೊಂಡ ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಎರಡು ತಿಂಗಳಾದರೂ ಸಹ ಉದ್ಘಾಟನೆಗೊಳ್ಳದೇ ಸಾರ್ವಜನಿಕರಿಗೆ ಬಳಕೆಯಾಗುತ್ತಿರಲಿಲ್ಲ ಈ ಬಗ್ಗೆ ಸಂಬಂಧಪಟ್ಟ ಚುನಾಯಿತ ಪ್ರತಿನಿಧಿಗಳಿಗೂ ಹಾಗೂ ಅಧಿಕಾರಿಗಳಿಗೂ ಹಲವಾರು ಬಾರಿ ಮನವಿ‌ ಮಾಡಿದರೂ ಸಹ ಗಮನ ಹರಿಸದೇ ನಿರ್ಲಕ್ಷ್ಯ ವಹಿಸಿದ್ದ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಬಳಿಯಿಂದ ಕಟ್ಟಡದ  ಕೀ ಯನ್ನು ಪಡೆದುಕೊಂಡು ಇಂದು ನಾನೇ ಉದ್ಘಾಟಿಸಿದ್ದೇನೆ ಎಂದರು.


ಯಾವುದೇ ಚುನಾಯಿತ ಪ್ರತಿನಿಧಿಗಳಿಗಾಗಲಿ ಅಧಿಕಾರಿಗಳಿಗಾಗಲಿ ಅವಹೇಳನ ಮಾಡುವ ಉದ್ದೇಶದಿಂದ ನಾನು ಈ ಕಾರ್ಯ ಮಾಡದೇ ಸಾರ್ವಜನಿಕರಿಗೆ ಈ ಕಟ್ಟಡ ಉಪಯೋಗವಾಗಲಿ ಎಂಬ ಉದ್ದೇಶದಿಂದ ಉದ್ಘಾಟನೆ ಮಾಡಿದ್ದೇನೆ.ಸರ್ಕಾರಿ ಸವಲತ್ತುಗಳು ಸಾರ್ವಜನಿಕರಿಗೆ ಯಾವುದೇ ಅಡೆತಡೆಗಳಿಲ್ಲದೇ ನೇರವಾಗಿ ತಲುಪುವಂತೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದರು.


 ಪ್ರತಿ ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಯೋಗ ಮಂದಿರವು ತೆರೆಯಲಿದ್ದು ಪಟ್ಟಣದ ಯೋಗ ಪ್ರೀಯರು ಸದೃಡ ಆರೋಗ್ಯವನ್ನು ಬಯಸುವವರು ಯೋಗ ಮಂದಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಈ ಸಂಧರ್ಭದಲ್ಲಿ ಮನವಿ‌ ಮಾಡಿದರು.

Leave a Reply

Your email address will not be published. Required fields are marked *