ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದ ಶರತ್ ಮೃತದೇಹ ವಾರದ ಬಳಿಕ ಪತ್ತೆ
ವಾರದ ಹಿಂದೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ವೀಕ್ಷಣೆ ವೇಳೆ ಆಕಸ್ಮಿಕವಾಗಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್ (23) ಮೃತಪಟ್ಟವರು.
ಕಳೆದೆರಡು ದಿನಗಳಿಂದ ಪರಿಸರದಲ್ಲಿ ಮಳೆ ಇಳಿಮುಖವಾಗಿದ್ದು ನೀರಿನ ಹರಿವು ಕಡಿಮೆಯಾಗಿದೆ. ಇದರಿಂದಾಗಿ ಫಾಲ್ಸ್ ನಲ್ಲಿ ಶರತ್ ಬಿದ್ದ ಸಮೀಪದ ಕಲ್ಲು ಪೊಟರೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಶರತ್ ಕಳೆದ ರವಿವಾರ (ಜು.23ರಂದು) ಸ್ನೇಹಿತನೊಂದಿಗೆ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಮಧ್ಯಾಹ್ನ 3:30ರ ಸುಮಾರಿಗೆ ಜಲಪಾತ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಬಿದ್ದು ಸೌಪರ್ಣಿಕ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಅವರು ಜಲಪಾತಕ್ಕೆ ಬೀಳುತ್ತಿದ್ದ ದೃಶ್ಯಗಳು ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿತ್ತು.
ಶರತ್ ಅವರೊಂದಿಗಿದ್ದ ಸ್ನೇಹಿತ ಮಾಹಿತಿ ನೀಡಿದ ತರುವಾಯ ಆತನ ಪತ್ತೆಗೆ ಶೋಧ ಕಾರ್ಯ ಬಿರುಸುಗೊಂಡಿತ್ತು. ಕೊಲ್ಲೂರು ಠಾಣೆ ಉಪನಿರೀಕ್ಷಕಿಯರಾದ ಜಯಶ್ರೀ, ಸುಧಾರಾಣಿ, ಠಾಣೆ ಸಿಬ್ಬಂದಿ, ಅರಣ್ಯ ಇಲಾಖೆ, ಎಸ್.ಡಿ.ಆರ್.ಎಫ್ ತಂಡ, ಉಡುಪಿ, ಬೈಂದೂರು, ಕುಂದಾಪುರ ಅಗ್ನಿಶಾಮಕ ತಂಡದ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ವಿಪರೀತ ಮಳೆ, ಇಂಬಳದ (ಜಿಗಣೆ) ಹುಳುಗಳು, ಕಡಿದಾದ ರಸ್ತೆಯಲ್ಲಿ ಸಾಗಿ ಕಾರ್ಯಾಚರಣೆ ನಡೆಸಲಾಗಿತ್ತು.