ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ,ಅರಸಾಳು ವ್ಯಾಪ್ತಿಯಲ್ಲಿ ಇತ್ತೀಚಿಗೆ ಚಿರತೆಯಿಂದ ಆತಂಕಕ್ಕೊಳಗಾಗಿರುವ ರೈತರಿಗೆ ಈಗ ನಾಯಿಗಳ ಕಾಟದಿಂದಾಗಿ ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.
ಅರಸಾಳು ಸಮೀಪ ಮಾಣಿಕೆರೆ ಗ್ರಾಮದಲ್ಲಿ ಬುಧವಾರ ನಾಯಿಗಳ ದಾಳಿಗೆ ವೇಲಾಯದನ್ ಅವರಿಗೆ ಸೇರಿದ ಸುಮಾರು 25 ಕುರಿಗಳು ಬಲಿಯಾಗಿವೆ.
ಎಂದಿನಂತೆ ವೇಲಾಯದನ್ ಮಾಣಿಕೆರೆ ಗ್ರಾಮದಲ್ಲಿ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಆಗ ಮನೆಯ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿವೆ. ಆದರೆ ಅಷ್ಟರಲ್ಲಾಗಲೇ ನಾಯಿಗಳು ಸುಮಾರು 25 ಕುರಿಗಳನ್ನು ಕಚ್ಚಿ ಸಾಯಿಸಿದೆ.
ನಾಯಿಯ ದಾಳಿಯಿಂದ ಬೆಚ್ಚಿರುವ ಅರಸಾಳು,ಮಾಣಿಕೆರೆ ಗ್ರಾಮಸ್ಥರು ‘ರಕ್ತದ ರುಚಿಕಂಡಿರುವ ಈ ನಾಯಿಗಳು ಮಕ್ಕಳ ಮತ್ತು ಜಾನುವಾರುಗಳ ಮೇಲೂ ದಾಳಿ ನಡೆಸಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಾಸಿಸಲು ಮನೆ ಇಲ್ಲದ ಬಡ ಕೃಷಿಕನ ಜೀವನಕ್ಕೆ ಆಸರೆಯಾಗಿದ್ದ ಕುರಿಗಳು ನಾಯಿ ದಾಳಿಯಿಂದ ಬಲಿಯಾಗಿರುವುದರಿಂದ ಬೇಸತ್ತು
ನಾಯಿಗಳ ಹಾವಳಿಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವ ಜತೆಗೆ, ಕುರಿಗಳ ಸಾವಿನಿಂದ ತಮಗಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಶು ವೈದ್ಯಕೀಯ ಮತ್ತು ಸೇವಾ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.