ರಿಪ್ಪನ್‌ಪೇಟೆ : ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥವಾಗಿರುವ ಕೈಗಾರಿಕಾ ವಸಾಹತು ಪ್ರದೇಶದ ಜಾಗ
ರಿಪ್ಪನ್‌ಪೇಟೆ : 2013 ರಲ್ಲಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಮಾಜಿ ಸಚಿವ ಕಾಗೋಡು ತಮ್ಮಪ್ಪನವರ ಕನಸಿನ ಹಲವು ಅಭಿವೃದ್ದಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದ ಸ್ವಾವಲಂಭಿ ಉದ್ಯೋಗಕ್ಕೆ ಉತ್ತೇಜನ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯಡಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆರೆಹಳ್ಳಿ ಹೋಬಳಿಯ ಕೆರೆಹಳ್ಳಿ ಗ್ರಾಮದ ಗ್ರಾಮ ಠಾಣಾದ 4 ಎಕರೆ ಜಾಗವನ್ನು ಮಂಜೂರು ಮಾಡಿಸುವ ಮೂಲಕ “ಕೈಗಾರಿಕಾ ವಸಾಹತು’’ಸ್ವಂತ ಸಣ್ಣ ಕೈಗಾರಿಕೆ ನಡೆಸುವವರಿಗೆ ಪ್ರತ್ಯೇಕ ಜಾಗ ಕೊಡುವ ವ್ಯವಸ್ಥೆ ಇದ್ದರೂ ಕೂಡಾ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಈ ಪ್ರದೇಶ ಅನಾಥವಾಗಿಯೇ ಉಳಿಯುವಂತಾಗಿದೆ.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಬಳಿಯಲ್ಲಿರುವ ಈ ಜಾಗದಲ್ಲಿ ಕೈಗಾರಿಕೆ ಆರಂಭಿಸಲು ಎಲ್ಲ ಮೂಲಭೂತ ಸೌಲಭ್ಯಗಳಾದ ಸಿಮೆಂಟ್ ಕಾಂಕ್ರೇಟ್ ರಸ್ತೆ ಕಟ್ಟಡ ನಿವೇಶನದ ವಿನ್ಯಾಸದ ನೀಲ ನಕ್ಷೆಯೊಂದಿಗೆ ಕುಡಿಯವ ನೀರು ಮತ್ತು ಇತರ ಸೌಲಭ್ಯಗಳನ್ನು ನಿರ್ಮಿಸಲಾಗಿದ್ದರೂ ಕೂಡಾ ಈ ಜಾಗದಲ್ಲಿ ಕೈಗಾರಿಕೆ ಅರಂಭಿಸಲು ಹಿಂದೇಟು ಹಾಕುತ್ತಿರುವ ಮರ್ಮ ತಿಳಿಯದಾಗಿದೆ.
ಕೆ.ಎಸ್.ಎಸ್.ಐ.ಡಿ.ಸಿ.ಜಿಲ್ಲಾ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ನಿಯಮಿತದವರ ರಿಪ್ಪನ್‌ಪೇಟೆಯಲ್ಲಿ ಸಣ್ಣ ಕೈಗಾರಿಕೆ ಅರಂಭಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರೂ ಕೂಡಾ ಇಲಾಖೆಯ ದುಬಾರಿ ಹಣ ಸಂದಾಯ ಮಾಡಿ ನಿವೇಶನವನ್ನು ಪಡೆಯಲು ಕಷ್ಟಕರವಾಗಿದೆ ಎಂಬ ಹಿನ್ನೆಲೆಯಲ್ಲಿ ಸ್ವಉದ್ಯೋಗಿಗಳು ನಿವೇಶನ ಮಂಜೂರಾತಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.ಒಟ್ಟಾರೆಯಾಗಿ ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ಗ್ರಾಮೀಣ ಪ್ರದೇಶದ ಸ್ವಉದ್ಯೋಗಿ ಕೈಗಾರಿಕೋದ್ಯಮಿಗಳು ಸರ್ಕಾರದ ಯೋಜನೆಯಿಂದ ದೂರ ಉಳಿಯುವಂತಾಗಿದೆ ಎಂದು ಹಲವರು ತಮ್ಮ ಅಸಮದಾನವನ್ನು ವ್ಯಕ್ತ ಪಡಿಸಿದರು.
ಈ ಸುಸಜ್ಜಿತ ಜಾಗದಲ್ಲಿನ ನಿವೇಶನ ವಿನ್ಯಾಸಕ್ಕೆ ರಸ್ತೆ ನೀರು ವಿದ್ಯುತ್ ಸೌಲಭ್ಯವನ್ನು ಕಲ್ಪಿಸಲಾಗಿದ್ದರೂ ಕೂಡಾ ಗಿಡಗಂಟಿ ಬೆಳದು ಈ ಜಾಗ ಗೊತ್ತಾಗದಂತಾಗಿದೆ.ಒಟ್ಟಾರೆ ಹೀಗೆ ಮುಂದುವರಿದರೆ ಒಂದಲ್ಲಾ ಒಂದು ದಿನ ಈ ಪ್ರದೇಶ ಖಾಸಗಿಯವರ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.