ಕರ್ನಾಟಕ ರಾಜ್ಯದ ನೂತನ ಸರ್ಕಾರ ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕುವಂತೆ ಸೂಚಿಸಿದ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಕಾರ್ಯಾಚರಣೆಗೆ ಇಳಿದಿದ್ದಾರೆ.
ಈ ನಡುವೆ , ಶಿವಮೊಗ್ಗದಲ್ಲಿ ಈ ಹಿಂದೆ ಬೆಂಗಳೂರಿನಲ್ಲಿ ಕಂಡುಬಂದಂತೆ ವ್ಯಕ್ತಿಯೊಬ್ಬ, ಖುದ್ದು ತನ್ನ ಮನೆಯಲ್ಲಿ ಗಾಂಜಾ ಕೃಷಿ ಆರಂಭಿಸಿದ್ದರ ಬಗ್ಗೆ ವರದಿಯಾಗಿದೆ. ವಿದೇಶಿ ಹೂವುಗಳನ್ನ ಬೆಳಸಲು ನೆಟ್ ಹಾಕಿ ಫಾರ್ಮಿಂಗ್ ಮಾಡುವ ಹಾಗೆ, ಈತ ಮನೆಯಲ್ಲಿಯೇ ನೆಟ್ ಬಳಸಿ , ಫ್ಯಾನು ಲೈಟು ಅಳವಡಿಸಿ ಗಾಂಜಾವನ್ನು ಪಾಟ್ಗಳಲ್ಲಿ ಬೆಳೆಯುತ್ತಿದ್ದ. ಸದ್ಯ ಈ ಬಗ್ಗೆ ಮಾಹಿತಿ ಪಡೆದು ಪೊಲೀಸರು ರೇಡ್ ನಡೆಸಿದ್ದಾರೆ.
ಈ ಸಂಬಂಧ ಇವತ್ತು ಶಿವಮೊಗ್ಗದಲ್ಲಿ ಪ್ರೆಸ್ ಮೀಟ್ ಕರೆದು ಮಾಹಿತಿ ನೀಡಿದ ಎಸ್ಪಿ ಮಿಥುನ್ ಕುಮಾರ್, ಘಟನೆಯನ್ನ ವಿವರಿಸಿದ್ಧಾರೆ. ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಬ್ಬರನ್ನ ಮಾದಕವಸ್ತುಗಳ ಮಾರಾಟದ ಕೇಸ್ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೆ ಅವರು ಸುಬ್ಬಯ್ಯ ಕಾಲೇಜ್ ಹತ್ತಿರದ ಶಿವಗಂಗಾ ಲೇಔಟ್ ನಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ.
ಆ ಮನೆಯೊಳಗೆ ದಾಳಿ ನಡೆಸಿದ ಪೊಲೀಸರಿಗೆ ಆತ ಗಾಂಜಾ ಬೆಳೆಸಲು ಮಾಡಿಕೊಂಡಿದ್ದ ವ್ಯವಸ್ಥೆಯು ಅಚ್ಚರಿ ಮೂಡಿಸಿತ್ತು ಏಕೆಂದರೆ ಅಲ್ಲಿ ಸ್ಪೈಡರ್ ಫಾರ್ಮರ್ ಹೆಸರಿನ ಬೋರ್ಡ್ನೊಂದಿಗೆ ವಿಶೇಷ ರೂಮಿನ ಮಾದರಿಯ ವ್ಯವಸ್ಥೆ ಮಾಡಲಾಗಿತ್ತು.ಆರ್ಟಿಪಿಶಲ್ ಟೆಂಟ್ ನಿರ್ಮಿಸಿ, ಅದರಲ್ಲಿ ಗಾಳಿ ಬೆಳಕು ಆಡದಂತೆ ಬಂದೋಬಸ್ತ್ ಆಗಿತ್ತು. ಅಲ್ಲಿರುವ ಕುಂಡಗಳಲ್ಲಿ ಗಾಂಜಾ ಜಬರ್ದಸ್ತ್ ಆಗಿ ಬೆಳೆದಿತ್ತು. ಅದಕ್ಕೆ ಚಿಕ್ಕದೊಂದು ಟೇಬಲ್ ಫ್ಯಾನ್ ಗಾಳಿ ಒದಗಿಸ್ತಿತ್ತು. ಇನ್ನೂ ಎಕ್ಸಿಟ್ ಫ್ಯಾನ್ವೊಂದು ಗಾಳಿಯನ್ನ ಒಂದೆ ಕಡೆ ಹೊರಕ್ಕೆ ಹಾಕುತ್ತಿತ್ತು. ಜಗಮಗಿಸುವ ಬೆಳಕನ್ನ ಒದಿಗಿಸುವ ಎಲ್ಇಡಿ ಲೈಟ್ ಪ್ಲೇಟ್ಗಳನ್ನು ಸನ್ ಲೈಟ್ ರೀತಿಯಲ್ಲಿ ಒದಗಿಸಲಾಗಿತ್ತು. ಟೆಂಪ್ರರೇಚರ್ ಕಂಟ್ರೋಲಡ್ ಸಿಸ್ಟಮ್ನ್ನ ತಯಾರಿ ಮಾಡಿಕೊಂಡು, ವ್ಯವಸ್ಥಿತವಾಗಿ ಗಾಂಜ ಬೆಳೆದಿದ್ದ ಆಸಾಮಿಗಳನ್ನು ಶಹಬ್ಬಾಸ್ ಎನ್ನಲು ಪೊಲೀಸರಿಗೆ ಚಾನ್ಸೇ ಇರಲಿಲ್ಲ. ಆದರೆ, ಇವರಲ್ಲೆನೋ ವಿಷಯ ಇದೆ ಅಂತಾ ಇನ್ನಷ್ಟು ಸರ್ಚ್ ಮಾಡಿದ್ದಾರೆ. ಆಗ ಗಾಂಜಾ ಮಾರಾಟಕ್ಕೆ ಬೇಕಾದ ವಸ್ತುಗಳು ಸೇರಿದಂತೆ ಮಾದಕವಸ್ತುಗಳ ದಂಧೆಗೆ ಅಗತ್ಯವಿದ್ದ ಎಲ್ಲಾ ಸಾಮಗ್ರಿಗಳು ಸಿಕ್ಕಿವೆ.
ಸದ್ಯ ಪ್ರಕರಣ ಸಂಬಂಧ 1) ವಿಘ್ನರಾಜ್, 28 ವರ್ಷ, ಜನ್ಮಪ್ರ ನಗರ, ಕೃಷ್ಣಗಿರಿ, ತಮಿಳುನಾಡು ರಾಜ್ಯ ಹಾಲಿ ವಾಸ ಭದ್ರಗಿರಿ ನಿಲಯ ಶಿವಗಂಗಾ ಲೇಔಟ್, ಪುರಲೆ ಶಿವಮೊಗ್ಗ 2) ವಿನೋದ್ ಕುಮಾರ್, 27 ವರ್ಷ, ಅಡಿಮಲಿ ಟೌನ್, ಇಡುಕ್ಕಿ ಜಿಲ್ಲೆ ಕೇರಳ ರಾಜ್ಯ ಹಾಲಿ ವಾಸ ಪುರಲೆ ಗ್ರಾಮ, ಶಿವಮೊಗ್ಗ ಮತ್ತು 3) ಪಾಂಡಿ, 27 ವರ್ಷ, ಕಡಗತ್ತೂರು, ಧರ್ಮಪುರಿ ಜಿಲೆ ತಮಿಳುನಾಡು ರಾಜ್ಯ ಹಾಲಿ ವಾಸ ಪುರಲೆ ಗ್ರಾಮ ಬಂಧಿಸಲಾಗಿದೆ. ವಿಶೇಷ ಅಂದರೆ, ಇವರೆಲ್ಲರೂ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳು!
ಏನೇನೆಲ್ಲಾ ಸಿಕ್ತು ಗೊತ್ತಾ?
ವಿಘ್ನರಾಜ್ ಎಂಬಾತನ ನಿವಾಸದಲ್ಲಿಯೇ ಗಾಂಜಾ ಬೆಳೆಯಲಾಗಿದ್ದು, ಆತನ ಮನೆಯಲ್ಲಿ ಒಟ್ಟು .227 ಗ್ರಾಂ ಒಣ ಗಾಂಜಾ ಅಂದಾಜು ಮೌಲ: 5800/- ರೂ, 1 ಕೆ.ಜಿ 530 ಗ್ರಾಂ ತೂಕದ ಹಸಿ ಗಾಂಜಾ, ಅಂದಾಜು ಮೌಲ: 30,000/- ರೂ, 10 ಗ್ರಾಂ ಚರಸ್ ಅಂದಾಜು ಮೌಲ್ಯ: 6,000/- ರೂ, ಗಾಂಜಾ ಬೀಜಗಳಿದ್ದ 01 ಚಿಕ್ಕ ಬಾಟಲ್, 03 ಕೆನಾಬಿಸ್ ಆಯಿಲ್ ಸೀರಿಂಜ್ ರೀತಿಯ ವಸ್ತುಗಳು, 03 ಕಬ್ಬಿಣದ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸ್ಯಾಂಡ್ ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 01 ಎಲೆಕ್ಟ್ರಾನಿಕ್ ತೂಕದ ಯಂತ್ರ, 1 EXIT ಫ್ರಾನ್, 6 ಟೇಬಲ್ ಫಾನ್ ಗಳು, 2 ಸೆಸರ್ ಗಳು, 3 LED ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ ಮತ್ತು 4 ಹುಕ್ಕಾ ಕಾಪ್‌ಗಳು, ಗಾಂಜಾ ಗಿಡದ ಕಾಂಡಗಳು, ಮತ್ತು ನಗದು ಹಣ 19,000/-ರೂಪಾಯಿಯನ್ನ ವಶಕ್ಕೆ ಪಡೆಯಲಾಗಿದೆ.
ಸದ್ಯ ಹೈಟೆಕ್ ಗಾಂಜಾ ಕೃಷಿಯ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಎಸ್ಪಿ ಮಿಥುನ್ ಕುಮಾರ್ ಶಹಬ್ಬಾಸ್ ಹೇಳಿದ್ದಾರೆ. ಈ ಹಿಂದೆ ಶಿವಮೊಗ್ಗದಲ್ಲಿ ಎಸ್ಪಿಯಾಗಿದ್ದ ಲಕ್ಷ್ಮೀಪ್ರಸಾಧ್ ಶಿವಮೊಗ್ಗ ಜಿಲ್ಲೆಯೊಳಗೆ ಬರುತ್ತಿದ್ದ ಗಾಂಜಾವನ್ನು ಸಾರಾಸಗಟಾಗಿ ಬಂದ್ ಆಗುವಂತೆ ಮಾಡಿದ್ದರು. ಕ್ವಿಂಟಾಲ್ಗಟ್ಟಲೇ ಆಂಧ್ರ ಗಾಂಜವನ್ನು ತಮ್ಮದೇ ಟ್ರೇಸಿಂಗ್ ನೆಟ್ವರ್ಕ್ನಲ್ಲಿ ಟ್ರೇಸ್ ಮಾಡಿಸಿದ್ದ ಅವರು, ಜಿಲ್ಲೆಯಲ್ಲಿನ ಗಾಂಜಾ ಆಸಾಮಿಗಳನ್ನು ಮುಲಾಜಿಲ್ಲದೇ ಅಂದರ್ ಮಾಡಿಸಿದ್ದರು. ಇದರ ನಡುವೆ ನಿರ್ಲಕ್ಷ್ಯ ವಹಿಸಿದ್ದ ಪೊಲೀಸರಿಗೂ ಅಮಾನತ್ತು ಶಿಕ್ಷೆ ನೀಡಿದ್ದರು. ಸದ್ಯ ಎಸ್ಪಿ ಮಿಥುನ್ ಕುಮಾರ್ರವರು ಕೂಡ ಅದೇ ದಾರಿಯಲ್ಲಿ ಹೆಜ್ಜೆ ಇಡುತ್ತಿರುವುದು ಸಮಾಧಾನದ ಸಂಗತಿಯಾಗಿದೆ.