ಮಳೆಯ ವಿಳಂಬದ ನಡುವೆ ಮಲೆನಾಡಿನಲ್ಲಿ ದಿನೇ ದಿನೇ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಶಿವಮೊಗದಲ್ಲಿ ಎರಡು ದಿನಗಳ ಹಿಂದಷ್ಟೇ ಟೊಮೆಟೊ ಕೆ.ಜಿಗೆ ₹40ಕ್ಕೆ ಸಿಗುತ್ತಿತ್ತು. ಆದರೆ ಈಗ ಅದು ₹80ಕ್ಕೆ ಹೆಚ್ಚಳಗೊಂಡಿದೆ.
ಅದರ ಬೆನ್ನಲ್ಲೇ ಬೀನ್ಸ್ ಕೆ.ಜಿಗೆ ₹100, ಕ್ಯಾರೆಟ್ ₹80, ಬದನೆ ₹60, ಮೂಲಂಗಿ ₹40, ಹೂಕೋಸು ₹40, ಆಲೂಗಡ್ಡೆ ₹25, ಬಟಾಣಿಯ ಬೆಲೆಯೂ (₹80) ಒಂದೂವರೆ ಪಟ್ಟು ಹೆಚ್ಚಾಗಿದೆ.
ಸೊಪ್ಪಿನ ಬೆಲೆಯೂ ಗಗನಕ್ಕೇರಿದೆ. ಕೊತ್ತಂಬರಿ ಕಟ್ಟಿಗೆ ₹ 10, ಸಬ್ಬಸಿಗೆ, ಎಳೆಹರಿವೆ, ದಂಟಿನ ಸೊಪ್ಪು, ಮೆಂತೆ ಸೊಪ್ಪು 1 ಕಟ್ಟಿಗೆ ₹10 ಆಗಿದೆ.
ಇದರ ಜೊತೆಗೆ ಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ. ಸೇಬು ಕೆ.ಜಿಗೆ ₹200 ದಾಟಿದೆ. ದಾಳಿಂಬೆ ₹300, ಕಿತ್ತಳೆ ಹಾಗೂ ಮೋಸಂಬಿ ₹200ರ ಆಸುಪಾಸಿನಲ್ಲಿವೆ. ಒಂದು ವಾರದ ಹಿಂದೆ ಮಾವಿನಹಣ್ಣಿನ ಸಾಮಾನ್ಯ ದರ ಕೆ.ಜಿ.ಗೆ ₹60 ಇತ್ತು. ಅದು ಈಗ ₹100ರ ಅಂಚಿನಲ್ಲಿದೆ.
ಜೂನ್ ತಿಂಗಳ ಆರಂಭದಲ್ಲೇ ಬರಬೇಕಿದ್ದ ಮಳೆ ಇನ್ನೂ ಬಂದಿಲ್ಲ. ಹೀಗಾಗಿ ಹಣ್ಣು-ತರಕಾರಿ ಬೆಲೆ ಏರಿಕೆಯಾಗಿದೆ ಎಂದು ಶಿವಮೊಗ್ಗ ಎಪಿಎಂಸಿ ಬಳಿಯ ತರಕಾರಿ ವ್ಯಾಪಾರಿಯೊಬ್ಬರು ಹೇಳುತ್ತಾರೆ.