ಶಿವಮೊಗ್ಗ ನಗರದ ವಿಜಯನಗರದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ನಿಯನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ತುಂಗಾನಗರ ಠಾಣೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 33.74 ಲಕ್ಷ ನಗದು, 1 ಕಾರು 3 ಬೈಕ್ 7 ಹೊಸ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 41.14 ಲಕ್ಷ ರೂ. ಮೌಲ್ಯದ ನಗದು ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಮಿಥುನ್‌ಕುಮಾರ್, ಮುಖ್ಯ ಆರೋಪಿ ಚಾಲಕ ಹನುಮಂತ ನಾಯ್ಕ (22) ಹುಣಸೋಡು ತಾಂಡಾ, ಗುಂಡಪ್ಪ ಶೆಡ್ ವಾಸಿ ಕೂಲಿ ಕೆಲಸದ ಪ್ರದೀಪ್ ಮೊದಲಿಯಾರ್ (21), ಅನುಪಿನಕಟ್ಟೆಯ ತಾಂಡಾದ ವಾಸಿಗಳಾದ ಅಪ್ಪು ನಾಯ್ಕ (21), ಪ್ರಭು ನಾಯ್ಕ (26), ರಾಜು ವೈ ಬಿನ್ ವೆಂಕ್ಯಾ ನಾಯ್ಕ್ (24) ಹಾಗೂ ಗುಂಡಪ್ಪ ಶೆಡ್‌ನ ಸತೀಶ್ (26) ಕಾರು ನೀಡಿದ್ದ ಕೌಶಿಕ್ ಬಂಧಿತ ಆರೋಪಿಗಳು ಎಂದು ಹೇಳಿದರು.
ಹೊಸದುರ್ಗದಲ್ಲಿ ನೀರಾವರಿ ಇಲಾಖೆಯ ಇಇ ಮಲ್ಲಿಕಾರ್ಜುನ್ ಪತ್ನಿ ಕಮಲಮ್ಮ (57) ಅವರು ಜೂನ್ 17 ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣದ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಕೊನೆಯಲ್ಲಿ ಸ್ಫೋಟಕ ಸತ್ಯ ಗೊತ್ತಾಗಿದೆ.
ಮಲ್ಲಿಕಾರ್ಜುನ್ ನಿವಾಸದಲ್ಲಿ ಹಣ ತಂದಿಟ್ಟಿರುವುದು ಆರೋಪಿ ಚಾಲಕ ಹನುಮಂತ್‌ಗೆ ಗೊತ್ತಿತ್ತು. ಹಣವನ್ನು ಕಾರಿನಿಂದ ಅವನೇ ತಂದು ಬೀರುವಿನಲ್ಲಿಟ್ಟಿದ್ದನು. ಇದನ್ನು ಪಡೆಯಲು ಸ್ಕೆಚ್ ಹಾಕಿದ್ದ ಹನುಮಂತ್ ತನ್ನ ಸ್ನೇಹಿತರ ನೆರವು ಪಡೆದು, ಜೂನ್ 16ರ ರಾತ್ರಿ 11 ಗಂಟೆಗೆ ಮಲ್ಲಿಜಾರ್ಜುನ್ ಮನೆಗೆ ತೆರಳಿ ಕಮಲಮ್ಮರ ಬಳಿ 3 ಸಾವಿರ ರೂ. ಹಣ ಕೇಳಿದ್ದ. ತನ್ನ ಅಣ್ಣನಿಗೆ ಅಪಘಾತವಾಗಿದ್ದು. ಮಣಿಪಾಲ್‌ಗೆ ಕರೆದೊಯ್ಯಲು ಹಣ ಬೇಕೆಂದು ಕೇಳಿದ್ದ. ಹಣ ಸಿಗದಿದ್ದರಿಂದ ವಾಪಸ್ ಆಗಿದ್ದ ಆರೋಪಿಗಳು ಜೂನ್ 17 ರಂದು ಮಧ್ಯಾಹ್ನ ಕಮಲಮ್ಮರ ಮನೆಗೆ ಬಂದಿದ್ದರು. ಕಮಲಮ್ಮ ಬಳಿ ಹಣ ಕೇಳಿದ್ದಾರೆ. ಆಗಲೂ ಕಮಲಮ್ಮ ಹಣ ನೀಡಲು ನಿರಾಕರಿಸಿದ್ದರೆಂದು ಹೇಳಿದರು.
ಕೊನೆಗೆ ಹಣ ಬೇಡ ನೀರು ತೆಗೆದುಕೊಂಡು ಬನ್ನಿ ಎಂದು ಆರೋಪಿಗಳು ಹೇಳಿದ್ದಾರೆ. ಕಮಲಮ್ಮ ನೀರು ತರಲು ಹೋದಾಗ ಆಕೆಯ ಬಾಯಿ ಮುಚ್ಚಿ, ತೆಂಗಿನಕಾಯಿ ಸಿಪ್ಪೆ ಸುಲಿಯುವ ಚೂಪಾದ ಆಯುಧದಿಂದ ಕುತ್ತಿಗೆ ಚುಚ್ಚಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಹಣ ಇಟ್ಟಲ್ಲಿಗೆ ಹೋಗಿ ೩೫ ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಆರೋಪಿಗಳು ಪರಾರಿ ಆಗಿದ್ದರು. ಪ್ರಕರಣದಿಂದ ತಪ್ಪಿಸಿಕೊಳ್ಳಲು ಹೊಸ ಮೊಬೈಲ್, ಹೊಸ ಸಿಮ್ ಖರೀದಿಸಿ ತಲೆ ಮರೆಸಿಕೊಂಡಿದ್ದರು.
ಕೊಲೆ ಮಾಡಿದ ನಂತರ ಗೋಪಾಳದ ಸರ್ಕಲ್‌ವರೆಗೆ ಬಂದು ಅಲ್ಲಿದ್ದ ತಮ್ಮ ಕಾರಿನಿಂದ ಪರಾರಿಯಾಗಿದ್ದರು. 35 ಲಕ್ಷ ರೂಪಾಯಿ ಹಣದಲ್ಲಿ 7 ಮಂದಿ ತಲಾ 5 ಲಕ್ಷ ರೂಪಾಯಿಯಂತೆ ಹಂಚಿಕೊಂಡಿದ್ದರು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಬಾಲರಾಜ್, ತುಂಗಾನಗರ ಸಿಪಿಐ ಮಂಜುನಾಥ್, ಪಿಎಸ್ ಐ ಕುಮಾರ್ ಕುರುಗುಂದ ಉಪಸ್ಥಿತರಿದ್ದರು.