ತಾಲ್ಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೂ ಕಾಂಗ್ರೆಸ್ ಸಿದ್ಧತೆ ಆರಂಭಿಸಿದ್ದು, ಈ ಸಂಬಂಧ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ವಿಶೇಷ ಅಂದರೆ, ಈ ಸಮಿತಿಯಲ್ಲಿ ಶಿವಮೊಗ್ಗದ ಆರ್ಎಂ ಮಂಜುನಾಥ್ ಗೌಡ ರಿಗೂ ಜವಾಬ್ದಾರಿ ನೀಡಲಾಗಿದೆ.
ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನಗಳಿಂದ ಗೆದ್ದು ಅಧಿಕಾರ ಹಿಡಿಯಲು ಈಗಿನಿಂದಲೇ ಪೂರ್ವ ತಯಾರಿ ಆರಂಭಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ವಿವಿಧ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಸೇರಿ 18 ಸದಸ್ಯರನ್ನೊಳಗೊಂಡ ‘ಜಿಪಂ, ತಾಪಂ ಚುನಾವಣಾ ಪೂರ್ವ ತಯಾರಿ ಸಮಿತಿ’ ರಚಿಸಿದ್ದಾರೆ. ಅಲ್ಲದೆ ಈ ಸಂಬಂಧ ಯಶಸ್ವಿಯಾಗಿ ಚುನಾವಣೆ ನಡೆಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ 15 ದಿನದೊಳಗೆ ಕೂಲಂಕಷ ವರದಿ ನೀಡಲು ಸೂಚಿಸಿದ್ದಾರೆ.
ಈ ಸಮಿತಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾಕಿಹೊಳಿ, ಸಲಿಂ ಅಹಮದ್, ಸಚಿವರಾದ ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಎಚ್.ಸಿ. ಮಹದೇವಪ್ಪ, ಡಾ.ಶರಣಪ್ರಕಾಶ್ ಪಾಟೀಲ್, ಆರ್.ಬಿ.ತಿಮ್ಮಾಪುರ, ಶಾಸಕರಾದ ಬಸವರಾಜ ರಾಯರೆಡ್ಡಿ, ರೂಪಕಲಾ ಶಶಿಧರ್, ಎ.ಎಸ್.ಪೊನ್ನಣ್ಣ, ಅಜಯ್ ಸಿಂಗ್, ಕೆ.ಎಂ.ಶಿವಲಿಂಗೇಗೌಡ, ಎಸ್.ಆರ್.ಶ್ರೀನಿವಾಸ್, ಎಂಎಲ್ಸಿ ಎಸ್.ರವಿ, ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಂಸದ ನಾರಾಯಣಸ್ವಾಮಿ, ಮಂಜುನಾಥಗೌಡರನ್ನು ಸದಸ್ಯರನ್ನಾಗಿ ಕೆಪಿಸಿಸಿ ಅಧ್ಯಕ್ಷರು ನೇಮಕ ಮಾಡಿದ್ದಾರೆ.
ಮಂಜುನಾಥ್ ಗೌಡರಿಗೆ ಡಿಕೆಶಿ ಪತ್ರ
ಮೊನ್ನೆ ಮೊನ್ನೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ರವರಿಗೆ ಪತ್ರ ಬರೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದೀಗ ಜಿಪಂ, ತಾಪಂ ಚುನಾವಣೆ ವಿಚಾರದಲ್ಲಿ ಆರ್ಎಂ ಮಂಜು ನಾಥ್ ಗೌಡರಿಗೆ ಪತ್ರ ಬರೆದಿದ್ಧಾರೆ. ಅಲ್ಲದೆ ಅದರ ಮೂಲಕ ಚುನಾವಣೆಗೆ ಸಿದ್ಧರಾಗುವಂತೆ ಸೂಚಿಸಿದ್ಧಾರೆ.
ಪತ್ರದ ಸಾರಾಂಶ :
ನಮ್ಮ ಸರ್ಕಾರ ರಚನೆಗೊಂಡು ಕಾರ್ಯನಿರ್ವಹಿಸಲು ಸಜ್ಜುಗೊಂಡ ಕೂಡಲೇ ಜಿಲ್ಲಾ ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗತ್ತಿವೆ. ಈ ಹಿನ್ನಲೆಯಲ್ಲಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಕಾನೂನಾತ್ಮಕ ಸಾಧಕ ಬಾದಕಗಳನ್ನು ಪರಾಮರ್ಶಿಸಿ ಒಂದು ವರದಿ ನೀಡಲು ತಮ್ಮನ್ನು ಈ ಪತ್ರದೊಂದಿಗೆ ಲಗತ್ತಿಸಿರುವಂತೆ “ಜಿಲ್ಲಾ/ತಾಲೂಕು ಪಂಚಾಯಿತಿ ಚುನಾವಣಾ ಪೂರ್ವತಯಾರಿ ಸಮಿತಿ” ರಚಿಸಿ ತಮ್ಮನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ತಾವುಗಳು ಕೂಡಲೇ ತಮಗೆ ನೀಡಿರುವ ಜವಾಬ್ದಾರಿಯನ್ನು ವಹಿಸಿಕೊಂಡು ಸಮಿತಿಯ ಇತರ ಸದಸ್ಯರೊಂದಿಗೆ ಚರ್ಚಿಸಿ ಹಾಗೂ ಸಂಬಂಧಪಟ್ಟ ಸ್ಥಳೀಯ ಮುಖಂಡರುಗಳನ್ನು ಸಂಪರ್ಕಿಸಿ ಈ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ಅತಿ ಹೆಚ್ಚು ಬಹುಮತವನ್ನು ಗಳಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಒಂದು ಸಮಗ್ರ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಹದಿನೈದು ದಿನಗಳ ಒಳಗಾಗಿ ಸಲ್ಲಿಸಬೇಕಾಗಿ ಕೋರುತ್ತೇನೆ ಎಂದು ತಿಳಿಸಿದ್ಧಾರೆ.