ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸಮಾನ ಮತದಾನ ಹಕ್ಕು ನೀಡಿದ ದೇಶ ಭಾರತ – ವೀರನಗೌಡ ಹುಡೇದ
ರಿಪ್ಪನ್ ಪೇಟೆ : ವಿಶ್ವದ ಕೆಲವು ದೇಶಗಳು ನೂರಾರು ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಸಹ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ. ಆ ರಾಷ್ಟ್ರಗಳು ಅನೇಕ ವರ್ಷಗಳ ನಂತರ ಸಮಾನ ಮತದಾನ ಹಕ್ಕು ಪಡೆಯುವಂತಾಯಿತು. ಆದರೆ ಭಾರತ ಮಾತ್ರ ಸ್ವಾತಂತ್ರ ಬಂದ ಪ್ರಥಮದಲ್ಲಿ ಸ್ತ್ರೀ-ಪುರುಷ ಎಂದು ಭೇದ ಭಾವ ಮಾಡದೆ ಸಮಾನ ಮತದಾನದ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಯಿತು. ಈ ಕಾರ್ಯದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ದೊಡ್ಡದು ಎಂದು ಸಹಾಯಕ ಪ್ರಾಧ್ಯಾಪಕ ವೀರನಗೌಡ ಹುಡೇದ ರವರು ತಿಳಿಸಿದರು.
ಇಂದು ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿ ರಿಪ್ಪನ್ ಪೇಟೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಸಮಿತಿ, ಹೊಸನಗರ. ಚುನಾವಣಾ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು ಸಮಿತಿ ಹೊಸನಗರ ಇದರ ಆಶ್ರಯದಲ್ಲಿ ಮತದಾನದ ಮಹತ್ವ ಕುರಿತು ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್ ಮಂಜುನಾಥ ಕಾಮತ್ ಗಿಡಕ್ಕೆ ನೀರೆರೆಯುವ ಮುಖಾಂತರ ಕಾರ್ಯಕ್ರಮದ ಉದ್ಘಾಟನೆ ಮಾಡಿದರು.
ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ.ಮ. ನರಸಿಂಹ ರವರು ಪ್ರಸ್ತಾವಿಕವಾಗಿ ಮಾತನಾಡಿದರು.
ಯುವ ಜನತೆ ಮತದಾನದ ಬಗ್ಗೆ ಜಾಗೃತಿ ಹೊಂದಬೇಕಾದ ಅವಶ್ಯಕತೆ ಬಗ್ಗೆ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜಿ. ಚಂದ್ರಶೇಖರ್ ಮಾತನಾಡಿದರು. ಹೋಬಳಿ ಕ.ಸಾ.ಪ. ಸಮಿತಿ ಅಧ್ಯಕ್ಷರಾದ ಆರ್ ನಾಗಭೂಷಣ ಮತ ನೊಂದಾವಣಿ ಬಗ್ಗೆ ಮಾತನಾಡಿದರು. ಕವಿಗಳಾದ ಗಣೇಶ್ ಮೂರ್ತಿ ನಾಗರ ಕೊಡುಗೆ ಹಾಸ್ಯ ಚಟಾಕಿಯೊಂದಿಗೆ ಮಾತನಾಡಿ ಕವನ ವಾಚಿಸಿದರು.ಹಾಗೂ ಜಾನಪದ ಕಲಾವಿದ ಆಂಜನೇಯ ಜೋಗಿ ಅವರು ಮತದಾರ ಜಾಗೃತಿ ಬಗ್ಗೆ ಲಾವಣಿ ಹಾಡಿದರು. ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಟಿ.ಚಂದ್ರಶೇಖರ್ ವಹಿಸಿದ್ದರು.
ಸಭೆಯಲ್ಲಿ ಸಾಹಿತಿ ಹ.ಆ. ಪಾಟೀಲ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಲ್ಲಿ ಕುಮಾರಿ ರಮ್ಯಾ ಪ್ರಾರ್ಥನೆ ಮಾಡಿದರು. ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಕುನುಗೋಡು ರವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.