ಸಾಗರ ವಿಧಾನಸಭಾ ಕ್ಷೇತ್ರದ ಹೊಸನಗರ ತಾಲೂಕಿನ ಹೆಬೈಲು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗ್ರಾಮಸ್ಥರು ದೇಣಿಗೆ ರೂಪದಲ್ಲಿ ಚುನಾವಣೆಗೆ ಠೇವಣಿ ಕಟ್ಟಲು ಹಣ ನೀಡಲು ಮುಂದಾದ ಸಂಧರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಭಾವುಕರಾದ ಘಟನೆ ನಡೆದಿದೆ.
ಹೆಬ್ಬೈಲು ಲೋಕಪ್ಪರವರ ಮನೆಯಲ್ಲಿ 2023ರ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಗೋಪಾಲಕೃಷ್ಣ ಬೇಳೂರು ಅಭಿಮಾನಿ ಬಳಗ ವಿಜಾಪುರ ಮತ್ತು ಮತ್ತಿಕೊಪ್ಪ ವತಿಯಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರುರವರಿಗೆ ದೇಣಿಗೆ ರೂಪದಲ್ಲಿ ಠೇವಣಿಗೆ ಹಣ ನೀಡಿದರು.
ಅಭಿಮಾನಿಗಳು ಪ್ರೀತಿಯಿಂದ ನೀಡಿದ ಠೇವಣಿ ಹಣ ಸ್ವೀಕಾರ ಮಾಡಿದ ನಂತರ ಗೋಪಾಲಕೃಷ್ಣ ಬೇಳೂರುರವರು ಸ್ವಲ್ಪ ಕಾಲ ಭಾವುಕರಾದರು.
ನಂತರ ಮಾತನಾಡಿದ ಅವರು ನಿಮ್ಮ ಈ ಪ್ರೀತಿಯೇ ನನ್ನನ್ನು ಈ ಮಟ್ಟಿಗೆ ಬೆಳೆಸಿದೆ ನಿಮ್ಮಂತಹ ಅಭಿಮಾನಿಗಳನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ.ಈ ಚುನಾವಣೆಯಲ್ಲಿ ನಿಮ್ಮೆಲ್ಲಾರ ಹಾರೈಕೆಯಿಂದ ಗೆದ್ದು ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದರು.
ಮೊನ್ನೆ ಒಬ್ಬ ವ್ಯಕ್ತಿ ನನ್ನ ತೋಟವನ್ನು ಮಾರಿ ನಿಮಗೆ ಚುನಾವಣೆಗಾಗಿ ಹಣ ನೀಡುತ್ತೇನೆ ಎಂಬುದಾಗಿ ಘೋಷಣೆ ಮಾಡ್ದಿದನು. ಒಂದು ಎಕರೆ ತೋಟ ಮಾರಿ ಎಷ್ಟೇ ಆಗಲಿ ನೀಡುತ್ತೇನೆ ಎಂದಿದ್ದನು. ಇದು ನನ್ನ ಮೇಲೆ ಇಟ್ಟಿರುವಂತ ನಿಮ್ಮ ಪ್ರೀತಿ ಅಷ್ಟು ದೊಡ್ಡದು. ಆ ಋಣ ತೀರಿಸುವುದಕ್ಕೆ ಆಗುವುದಿಲ್ಲ. ಆ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದರು.
ನಿಮ್ಮ ಎಲ್ಲರ ಪ್ರೀತಿ, ವಿಶ್ವಾಸ ನನ್ನ ಮೇಲಿದೆ ಎಂಬುದಾಗಿ ನನಗೆ ಗೊತ್ತಿದೆ. ಆ ಪ್ರೀತಿ, ವಿಶ್ವಾಸವನ್ನು ವೋಟ್ ರೂಪದಲ್ಲಿ ವ್ಯಕ್ತಪಡಿಸಿ. ನಾನು ನಿಮ್ಮ ಋಣ ತೀರಿಸುವ ಕೆಲಸ ಮಾಡುವೆ. ಗೋಪಾಲಕೃಷ್ಣ ಬೇಳೂರು ಜನರನ್ನು ಬಿಟ್ಟು ದೂರ ಇರುವುದಿಲ್ಲ. ಜನರೊಂದಿಗೆ ಇರುತ್ತೇನೆ ಎಂದರು.
ಈಗಾಗಲೇ ಬಹಳಷ್ಟು ಜನ ನನಗೆ ದೇಣಿಗೆ ರೂಪದಲ್ಲಿ ಚುನಾವಣೆಗೆ ಹಣ ನೀಡುವುದಾಗಿ ತಿಳಿಸುತ್ತಿದ್ದಾರೆ. ಆ ಬೆಂಬಲ ಸಾಕು. ನಿಮ್ಮ ಸಂಪೂರ್ಣ ಬೆಂಬಲ ನನ್ನ ಮೇಲೆ ಇರಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ , ಮಾರುತಿಪುರ ಗ್ರಾಪಂ ಅಧ್ಯಕ್ಷ ಪಿ ಚಿದಂಬರಂ ,ಸಣ್ಣಕ್ಕಿ ಮಂಜು ಹಾಗೂ ಇನ್ನಿತರರಿದ್ದರು.