ತೀರ್ಥಹಳ್ಳಿ : ಈ ಬಾರಿಯ ಚುನಾವಣೆ ನನ್ನ ಕೊನೆ ಚುನಾವಣೆಯಾಗಿದ್ದು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಹತ್ತನೇ ಬಾರಿಗೆ ಒಂದೇ ಪಕ್ಷ ಒಂದೇ ಚಿಹ್ನೆಯಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 9 ಚುನಾವಣೆಯಲ್ಲಿ 4 ಬಾರಿ ತೀರ್ಥಹಳ್ಳಿ ಜನ ನನ್ನನ್ನು ಗೆಲ್ಲಿಸಿದ್ದಾರೆ. 15 ಸಾವಿರಕ್ಕೂ ಹೆಚ್ಚು ಜನ ಇವತ್ತು ಬಂದು ನನಗೆ ಆಶೀರ್ವದಿಸಿದ್ದಾರೆ ಇದೇ ನನ್ನ ಕೊನೆಯ ಚುನಾವಣೆಯಾಗಿದ್ದು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದಲ್ಲಿ ಖಂಡಿತ ಜನ ಕಾಂಗ್ರೆಸ್ ಪಕ್ಷದವರನ್ನು ನಂಬುವುದಿಲ್ಲ. ನಾನು ಅಭಿವೃದ್ಧಿ ಆಧಾರದಲ್ಲಿ ಮತ ಕೇಳುತ್ತಾ ಇದ್ದೇನೆ. ಇಲ್ಲಿಯವರೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಒಂದು ಅವಧಿಯಲ್ಲಿ ಅಭಿವೃದ್ಧಿ ಆಗಿರಲಿಲ್ಲ. ಮೊದಲ ಒಂದು ವರ್ಷ ಸಮ್ಮಿಶ್ರ ಸರ್ಕಾರವಿತ್ತು. ನಂತರದ ಎರಡು ವರ್ಷ ಕೋವಿಡ್ ನಿಂದ ಸಮಸ್ಯೆ ಆಯ್ತು ಉಳಿದ ಎರಡು ವರ್ಷಗಳಲ್ಲಿ 3200 ಕೋಟಿ ರೂಪಾಯಿ ಎಷ್ಟು ಹಣ ತಂದಿದ್ದೇನೆ. ಯಾವುದೇ ಹಳ್ಳಿಗೆ ಹೋದರು ಅಭಿವೃದ್ಧಿ ಕಾರ್ಯ ನಡೆಯುವುದನ್ನು ಗಮನಿಸಬಹುದು ಎಂದರು.
ಹಿರಿಯರು ಪಕ್ಷ ಬಿಡುತ್ತಿರುವ ವಿಚಾರದ ಬಗ್ಗೆ ಮಾತನಾಡಿ ಇದರಿಂದ ಯಾವ ಪರಿಣಾಮವೂ ಬೀರುವುದಿಲ್ಲ. ಬಿಜೆಪಿ ಹೈಕಮಾಂಡ್ ಸರ್ವೇ ಮಾಡಿ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಂಡಿದೆ. ಇಡೀ ದೇಶದಲ್ಲಿ ಇಂತಹ ನಿರ್ಧಾರಗಳು ಯಶಸ್ವಿಯಾಗಿವೆ. ಕರ್ನಾಟಕದಲ್ಲೂ ಅದೇ ನಿರ್ಧಾರ ತೆಗೆದುಕೊಂಡಿದೆ ದುರದೃಷ್ಟಕರ ಸಂಗತಿ, ಪಕ್ಷ ಬಿಟ್ಟು ಹೋಗಬಾರದಿತ್ತು ಪಕ್ಷ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಮಾಡಿದೆ. ಪಕ್ಷ ಎಲ್ಲ ರೀತಿಯ ಸೌಲಭ್ಯ, ಅವಕಾಶ ನೀಡಿದೆ. ಅವರು ಬಿಟ್ಟು ಹೋಗುವುದರಲ್ಲಿ ಅರ್ಥವಿಲ್ಲ. ಸೈದ್ಧಾಂತಿಕವಾಗಿ ನಾವು ಇದ್ದರೆ ಪಕ್ಷ ಬಿಡುವ ಪ್ರಶ್ನೆಯೇ ಬರುವುದಿಲ್ಲ ಎಂದರು.
ಕುಶಾವತಿ ಪಾರ್ಕ್ ನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಹೊರಟ ಆರಗ ಜ್ಞಾನೇಂದ್ರ ಕಾರ್ಯಕರ್ತರೊಡನೆ ಡಿಜೆ ಸೌಂಡ್ಸ್ ನೊಂದಿಗೆ ಹೆಜ್ಜೆ ಹಾಕಿದರು.ರಸ್ತೆಯುದ್ಧಕ್ಕೂ ಪಕ್ಷದ ಬಾವುಟ ಹಿಡಿದು ಕುಣಿದು ಕುಪ್ಪಳಿಸುತ್ತಿದ್ದ ಕಾರ್ಯಕರ್ತರು, ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ನಾಮಪತ್ರ ಸಲ್ಲಿಸಿದರು.