ಜನಸಂಕಲ್ಪ ಮಹಾಸಂಗಮ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ಪ್ರಯಾಣ ಬೆಳೆಸಿದರು.
ಪ್ರಧಾನಿ ನರೇಂದ್ರ ಮೋದಿ, ಅವರ ಸಿಬ್ಬಂದಿಗಳು ಹಾಗೂ ಭದ್ರತಾ ಸಿಬ್ಬಂದಿಗಳು ಮೂರು ಸೇನಾ ಹೆಲಿಕಾಪ್ಟರ್’ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಂಸದ ಬಿ.ವೈ. ರಾಘವೇಂದ್ರ, ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಶಾಸಕರಾದ ಹಲತಾಳು ಹಾಲಪ್ಪ, ಎಂಎಲ್’ಸಿಗಳಾದ ಡಿ.ಎಸ್. ಅರುಣ್, ಆಯನೂರು ಮಂಜುನಾಥ್ ಸೇರಿದಂತೆ ಹಲವು ಪ್ರಮುಖರು ಪ್ರಧಾನಿಯವರನ್ನು ಸ್ವಾಗತಿಸಿದರು.
ಇದಾದ ನಂತರ ಭಾರತೀಯ ವಾಯು ಸೇನೆಯ ವಿಶೇಷ ವಿಮಾನದಲ್ಲಿ 5.40ಕ್ಕೆ ಪ್ರಧಾನಿ ಮೋದಿಯವರು ನವದೆಹಲಿಯತ್ತ ಪ್ರಯಾಣ ಬೆಳೆಸಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗದಲ್ಲಿ ಏರ್ ಪೋರ್ಟ್ ಆದ ನಂತರ ಪ್ರಧಾನಿ ಮೋದಿ ಎರಡನೇ ಬಾರಿ ಬಂದಿದ್ದಾರೆ. ಯಶಸ್ವಿಯಾಗಿ ಲ್ಯಾಂಡ್ ಆಗಿ ಟೇಕಾಫ್ ಆಗಿದ್ದಾರೆ ಎಂದರು.
ಇದು ಸಂತೋಷದ ಸಂಗತಿ, ರಾಜ್ಯದ ಯಾವುದೇ ಏರ್ ಪೋರ್ಟ್ ನಲ್ಲಿ ಈ ರೀತಿ ಆಗಲು ಸಾಧ್ಯವಿಲ್ಲ. ಸದ್ಯದಲ್ಲೇ ಡೊಮೆಸ್ಟಿಕ್ ಏರ್‌ಲೈನ್ ಬರುತ್ತವೆ.ಇದಕ್ಕೂ ಮುನ್ನವೇ ಪ್ರಧಾನಿಯವರು ಏರ್ ಪೋರ್ಟ್ ನಲ್ಲಿ ಸಂಚರಿಸಿದ್ದಾರೆ ಎಂದರು.
ದಾವಣಗೆರೆಯಲ್ಲಿ ಬಹಳ ದೊಡ್ಡ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಅದ್ಭುತವಾಗಿ ಜನಸಂದಣಿ ಸೇರಿತ್ತು. ಜನಸಂದಣಿ ಮಧ್ಯದಲ್ಲಿ ಮೋದಿಯವರು ತೆರಳಿ ಜನರತ್ತ ಕೈಬೀಸಿದರು.ಚುನಾವಣೆ ಪೂರ್ವ ಜನಸ್ಪಂದನೆ ಹೇಗಿದೆ ಅಂತ ದಾವಣಗೆರೆ ಕಾರ್ಯಕ್ರಮದಿಂದ ಗೊತ್ತಾಗಿದೆ ಎಂದರು.
ಮೋದಿ ಆಗಮನದಿಂದ ಬಿಜೆಪಿಗೆ ಹೊಸ ಹುರುಪು ನೀಡಿದಂತಾಗಿದೆ. ನಾವೆಲ್ಲರೂ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಅವರನ್ನ ಬರಮಾಡಿಕೊಂಡೆವು. ಪಕ್ಷದ ಆಯ್ದ ಕಾರ್ಯಕರ್ತರನ್ನು ಮೋದಿಯವರು ಭೇಟಿಯಾಗಿದ್ದಾರೆ. ಎಂದರು.