ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಅಕೇಶಿಯ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಣಬಂದೂರು ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಹೆದ್ದಾರಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗೂಡ್ತಿ ಗ್ರಾಮದ ವಾಸಿ, ನಾಗರಾಜ್ (52) ಎಂಬ ವ್ಯಕ್ತಿಯು ಅನಾರೋಗ್ಯ ಕಾರಣದಿಂದ ಮನನೊಂದು ತಮ್ಮ ಮನೆಯ ಸಮೀಪದ ಪ್ಲಾಂಟೇಷನ್ ನಲ್ಲಿ ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಹಳ ದಿನಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಅನಾರೋಗ್ಯ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೀಳ್ಯದ ಎಲೆ ವ್ಯಾಪಾರಿಯಾದ ಇವರು ಜನರ ಪ್ರೀತಿ ಪಾತ್ರಕ್ಕೆ ಹಾಗೂ ವಿಶ್ವಾಸ ಗಳಿಸಿಕೊಂಡಿದ್ದರು ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿದ್ದ ಇವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದು ಇವರ ಹೆಂಡತಿ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಣೋತ್ತರ ಪರೀಕ್ಷಾ ಕೊಠಡಿಯಲ್ಲಿ ವಿದ್ಯುತ್ ಇಲ್ಲದೆ ಪರದಾಡಿದ ಮೃತರ ಕುಟುಂಬಸ್ಥರು
ಇಂದು ಮಧ್ಯಾಹ್ನ ಮೂಗೂಡ್ತಿ ನಿವಾಸಿ ನಾಗರಾಜ್ ಮೃತಪಟ್ಟಿದ್ದು ಸಂಜೆ 05 ಗಂಟೆಯ ಸುಮಾರಿಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ತರಲಾಗಿತ್ತು.
ಆದರೆ ವೈದ್ಯರು ಸಕಾಲದಲ್ಲಿ ದೊರೆಯದೇ ಮರಣೋತ್ತರ ಪರೀಕ್ಷೆ ವಿಳಂಬವಾಗಿದಲ್ಲದೇ ಮರಣೋತ್ತರ ಪರೀಕ್ಷಾ ಕೊಠಡಿಯಲ್ಲಿ ವಿದ್ಯುತ್ ಲೈನ್ ಶಾರ್ಟ್ ಆಗಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೇ ಮೃತರ ಕುಟುಂಬಸ್ಥರು ಪರದಾಡುವ ಸ್ಥಿತಿ ಕಂಡುಬಂತು.
ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಆರೋಗ್ಯ ರಕ್ಷಾ ಸಮಿತಿಯವರಿಗೆ ಹಿಡಿಶಾಪ ಹಾಕುತ್ತಾ ಬೆಳಕಿನ ವ್ಯವಸ್ಥೆಗೆ ಒದ್ದಾಡುತಿದ್ದ ದೃಶ್ಯ ಕಂಡುಬಂದಿತು.