ಯುವಕರು ಅಪ್ರತಿಮ ಹೋರಾಟಗಾರ ಛತ್ರಪತಿ ಶಿವಾಜಿ ಜೀವನ ಚರಿತ್ರೆ ಅರಿಯುವುದು ಅಗತ್ಯ – ಆದರ್ಶ ಗೋಖಲೆ
ರಿಪ್ಪನ್‌ಪೇಟೆ : ಅಪ್ರತಿಮ ಹೋರಾಟ, ವಿಭಿನ್ನ ಯುದ್ಧಕಲೆ, ಸಂಘಟನಾ ಚತುರತೆ, ಆದರ್ಶ ದೇಶ ಪ್ರೇಮದ ಮೂಲಕ ಇಂದಿಗೂ ನಮ್ಮೆಲ್ಲರಿಗೆ ಆದರ್ಶಪ್ರಾಯ ಆಗಿರುವ ಶಿವಾಜಿ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಅರಿಯುವುದು ಅಗತ್ಯ ಎಂದು ಯುವ ಚಿಂತಕ, ಪ್ರಖರ ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಪಟ್ಟಣದಲ್ಲಿ ಮರಾಠ ಸಮಾಜ ಭಾನುವಾರ ಆಯೋಜಿಸಿದ್ದ ಶಿವಾಜಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯಿ ಜೀಜಾಬಾಯಿ ಶಿವಾಜಿಗೆ ಯುದ್ಧ ಕಲೆ ಕಲಿಸಿದ್ದಳು, ಎಂತಹ ಕಷ್ಟ ಎದುರಾದರೂ ಅದನ್ನು ತಾಳ್ಮೆಯಿಂದ ಎದುರಿಸುವ ಕಲೆ ಅವರು ಹೊಂದಿದ್ದ. ಇಡೀ ದೇಶದಲ್ಲಿ ಬ್ರಿಟಿಷರು, ಮೊಘಲರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಸ್ವರಾಜ್ಯದ ಕಲ್ಪನೆ ಕಂಡಿದ್ದ ಶಿವಾಜಿ 16ನೇ ವಯಸ್ಸಿನಲ್ಲೇ ಹೋರಾಟ ಮನೋಭಾವ ಇಟ್ಟುಕೊಂಡಿದ್ದರು ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬ ಯುವಕ ಅರಿಯಬೇಕೆಂದರು.
ಛತ್ರಪತಿ ಶಿವಾಜಿ ಪ್ರತಿಮೆಗೆ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಪುಷ್ಪ ಹಾಕುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿವಾಜಿಯಲ್ಲಿನ ರಾಷ್ಟ್ರ ಪ್ರೇಮ ದೇಶ ಭಕ್ತಿ ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಿಯಾಗಬೇಕು ಹಾಗೂ ಮರಾಠ ಜನಾಂಗಕ್ಕೆ ಸೀಮಿತವಾಗದೇ ಸರ್ವ ಜನಾಂಗದವರು ಈ ಜಯಂತ್ಯೋತ್ಸವವನ್ನು ಆಚರಿಸುವಂತಾಗಬೇಕು ಎಂದರು.
ಛತ್ರಪತಿ ಶಿವಾಜಿ ಪ್ರತಿಮೆಯ ಮೆರವಣಿಗೆ ಹಾಗೂ ಯುವಕರ ಬೈಕ್ ರ‍್ಯಾಲಿಯೊಂದಿಗೆ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಗಮನ ಸೆಳೆಯಿತು.
ಶಿವಾಜಿ ಮರಾಠ ಸಂಘದ ಅಧ್ಯಕ್ಷ ವೈ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಗೋಸಾಯಿ ಮಹಾಸಂಸ್ಥಾನ ಮಠದ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಸ್ವಾಮೀಜಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಡಾ.ರಾಜಾನಂದಿನಿ, ಸಮಾಜದ ಮುಖಂಡರಾದ ತುಳೋಜಿರಾವ್, ಎಲ್.ದೇವರಾಜ, ರಾಮಚಂದ್ರ, ದೇವರಾಜ್‌ಕುಷನ್, ಸುಂದರೇಶ್, ಎನ್.ಚಂದ್ರೇಶ್, ದಿವಾಕರ, ಕೃಷ್ಣ ಚಂದಳ್ಳಿ, ಶ್ರೀಮಂತ, ಹೆಚ್.ಎಸ್.ಶಿವಕುಮಾರ್ ಇನ್ನಿತರರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.