ಮಾನಸಿಕ ಸಂತೋಷವೇ ಸುಖದ ಮೂಲ – ಉಜ್ಜಯಿನಿ ಶ್ರೀಗಳು
ರಿಪ್ಪನ್‌ಪೇಟೆ : ಮಾನಸಿಕ ಸಂತೋಷವೇ ಸುಖದ ಮೂಲವಾಗಿದ್ದು, ಮನುಷ್ಯ ಆರೋಗ್ಯದಿಂದ ಇದ್ದಾಗ ಮಾತ್ರ ಜಗತ್ತಿನ ಎಲ್ಲಾ ಸುಖಗಳನ್ನು ಅನುಭವಿಸಲು ಸಾಧ್ಯ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ನೂತನ ಶ್ರೀ ನಂದಿ ಹಾಸ್ಪಿಟಲ್ ನ್ನು ಉದ್ಘಾಟಿಸಿ, ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರೋಗ ರುಜಿನಗಳು ಮನುಷ್ಯನಿಗೆ ಸಹಜ. ರೋಗ ಬಂದ ನಂತರ ವೈದ್ಯರನ್ನು ಕಾಣುವುದು ಇದ್ದೇ ಇರುತ್ತದೆ. ಆದರೆ ರೋಗವೇ ಬರದಂತೆ ಬದುಕು ನಡೆಸುವುದನ್ನು ಇಂದು ಎಲ್ಲರೂ ಕಲಿಯಬೇಕು. ಮುನ್ನೆಚ್ಚರಿಕೆಯಿಂದಲೇ ಆರೋಗ್ಯ ರಕ್ಷಿಸಿಕೊಳ್ಳುವುದಕ್ಕೆ ಒತ್ತು ನೀಡಬೇಕು. ಅಧಿಕಾರ, ಸಂಪತ್ತು ಮತ್ತು ಪ್ರಸಿದ್ಧಿಯಿಂದ ಬದುಕು ಸಂಪೂರ್ಣವಾಗದು. ನಿರೋಗಿ ಕಾಯದಿಂದಲೇ ನಿಜವಾದ ಸುಖ ಸಾಧ್ಯ. ಋಷಿಮುನಿಗಳು ಮತ್ತು ಶರಣರು ಬಹಳ ಹಿಂದೆಯೇ ಆರೋಗ್ಯದ ಪರಿಕಲ್ಪನೆ ಕೊಟ್ಟಿದ್ದಾರೆ. ಮನಸ್ಸಿನಿಂದ ಸದೃಢ ಮತ್ತು ದೈಹಿಕವಾಗಿ ಕಟ್ಟುಮಸ್ತಾದವನು ಮಾತ್ರ ಆರೋಗ್ಯದಿಂದ ಇರಲು ಸಾಧ್ಯ ಎಂದರು. ಜಿಮ್‌ಗೆ ಹೋಗುವವರಿಗಿಂತಲೂ ಜಮೀನಿಗೆ ಹೋಗುವವರು ಹೆಚ್ಚು ಆರೋಗ್ಯದಿಂದ ಇದ್ದಾರೆ. ರೋಗಕ್ಕಿಂತ ಮುಖ್ಯವಾಗಿ ರೋಗಿಯನ್ನು ಚಿಕಿತ್ಸೆಗೆ ಒಳಪಡಿಸಬೇಕು. ವೈದ್ಯರು ರೋಗಿಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಕಾಯ ಸದೃಢವಾಗಿರಬೇಕು, ಮನಸ್ಸು ಪ್ರಸನ್ನವಾಗಿರಬೇಕು. ಹೃದಯ ದ್ವೇಷದಿಂದ ಮುಕ್ತವಾಗಿದ್ದಾಗ ಮಾತ್ರ ನಿಜವಾದ ಆರೋಗ್ಯ ಸಾಧ್ಯ ಎಂದು ಹೇಳಿದರು.
ಆಸ್ಪತ್ರೆಗಳು ಮತ್ತು ವೈದ್ಯರು ಬಡವರಿಗೆ ಉತ್ತಮ ಆರೋಗ್ಯ ಕಲ್ಪಿಸುವುದಕ್ಕೆ ಶ್ರಮಿಸಬೇಕು. ದೇಹಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿದರೆ ಸಾಲದು. ಮನಸ್ಸಿಗೂ ಇಂದು ಹೆಚ್ಚಿನ ಚಿಕಿತ್ಸೆಗಳು ಅಗತ್ಯವಿದೆ. ದೇಹ-ಮನಸ್ಸು ಸರಿಯಾಗಿರಲು ಸಜ್ಜನರ ಮಾತು ಮತ್ತು ಸರ್ಜನ್‌ರ ಮಾತುಗಳನ್ನು ಕೇಳಬೇಕು. ಯುಕ್ತವಾದ ಆಹಾರ, ನಿದ್ಧೆ ಮತ್ತು ಮನಸ್ಸಿನಿಂದ ಮಾತ್ರ ಆರೋಗ್ಯ ಸಾಧ್ಯ. ದುಡಿದು ಉಣ್ಣಬೇಕು. ಕಾಯಕದ ಬದುಕಿನಿಂದ ಮಾತ್ರ ನೆಮ್ಮದಿ ಸಾಧ್ಯ ಎಂದು ಶ್ರೀಗಳು ಹೇಳಿದರು.
ಆನಂದಪುರದ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾರಕ ರೋಗಗಳಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ದೂರದ ಅಸ್ಪತ್ರೆಗಳಿಗೆ ಹೋಗಿ ಬರುವುದೇ ಕಷ್ಟವಾಗಿರುವಾಗ ರಿಪ್ಪನ್‌ಪೇಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಆರಂಭಿಸುವುದರೊಂದಿಗೆ ಸಾಕಷ್ಟು ವೈದ್ಯರಿಗೆ ಮತ್ತು ಅರೋಗ್ಯ ಶೂಶ್ರೂಷಿಕಿಯರಿಗೆ ಔಷದಿ ಅಂಗಡಿಯವರಿಗೆ ಸ್ವಾವಲಂಭಿ ಬದುಕಿಗೆ ಮಾರ್ಗದರ್ಶಿಯಾಗಿರುವುದು ಪ್ರಶಂಸನೀಯವೆಂದರು.
ಈ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ, ನಾರಾಯಣ ಗುರು ಪೀಠದ ರೇಣುಕಾನಂದ ಮಹಾಸ್ವಾಮೀಜಿ,ಶಾಸಕ ಹರತಾಳು ಹಾಲಪ್ಪ ನೂತನ ಆಸ್ಪತ್ರೆಯ ಮಾಲೀಕರಾದ ಸಚಿನ್ ಗೌಡ ಮತ್ತು ವಚನ್ ಗೌಡ ಮುಖಂಡರಾದ ಜೆ.ಎ.ಶಾಂತ ಕುಮಾರ್,ಹುಗುಡಿ ರಾಜು,ಬೆಳಕೋಡು ಹಾಲಸ್ವಾಮಿಗೌಡ ಇನ್ನಿತರರು ಹಾಜರಿದ್ದರು.