ರಿಪ್ಪನ್‌ಪೇಟೆ : ಫೆಬ್ರವರಿ 27 ರಂದು ಸೋಗಾನೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ವರದಿಗಾಗಿ ತೆರಳಿದ್ದ ಹಿರಿಯ ಪತ್ರಕರ್ತ ಆರ್.ಎಸ್. ಹಾಲಸ್ವಾಮಿ (ಟಿವಿ ಭಾರತ್) ಅವರನ್ನು ಅಕ್ರಮವಾಗಿ ಪೊಲೀಸ್ ವಾಹನದಲ್ಲಿ ಕೂಡಿಟ್ಟು ಉದ್ದಟತನದಿಂದ ವರ್ತಿಸಿದ ದಾವಣೆಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಅಮಾನತ್ತಿನಲ್ಲಿಡುವಂತೆ ಒತ್ತಾಯಿಸಿ ಶನಿವಾರ ಪಟ್ಟಣದ ಪತ್ರಕರ್ತ ಸಂಘಟನೆಗಳಿಂದ ಗೃಹ ಸಚಿವರಿಗೆ ರಾಜಸ್ವ ನಿರೀಕ್ಷಕರಾದ ಅಫ಼್ರೋಜ್ ರವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಕೆ ಎಂ ಬಸವರಾಜ್ ಶಿವಮೊಗ್ಗ ನಗರದ ಸೋಗಾನೆಯ ನೂತನ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭ ಮುಕ್ತಾಯವಾಗಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಅತಿಗಣ್ಯರು ವೇದಿಕೆಯಿಂದ ನಿರ್ಗಮಿಸಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸಭಾ ಸ್ಥಳದಿಂದ ಹೊರ ಬರಲಾರಂಭಿಸಿದ್ದು ವಿಮಾನ ನಿಲ್ದಾಣದ ಕಡೆಗೆ ಹೋಗುವ ಉತ್ಸಾಹದಲ್ಲಿದ್ದರು. ಆದರೆ ಅವರನ್ನು ತಡೆಯುವಲ್ಲಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ದಾವಣಗೆರೆ ಎಸ್ಪಿ ಸಿ.ಬಿ. ರಿಷ್ಯಂತ್ ಅವರು ಸಮಯ ಪ್ರಜ್ಞೆಯಿಂದ ಕೆಲಸ ಮಾಡದೆ. ಪರಿಸ್ಥಿತಿ ಅಂತಹ ಗಂಭೀರವಲ್ಲದಿದ್ದರೂ ಲಾಠಿಚಾರ್ಜ್ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಟಿವಿ ಭಾರತ್ ನ ಸಂಪಾದಕರಾದ ಆರ್.ಎಸ್.ಹಾಲಸ್ವಾಮಿ ಅವರು ಒಟ್ಟಾರೆ ಪರಿಸ್ಥಿತಿಯ ಚಿತ್ರೀಕರಣದಲ್ಲಿ ತೊಡಗಿದ್ದು ಲಾಠಿಚಾರ್ಜ್ ಘಟನೆಯನ್ನು ಚಿತ್ರೀಕರಿಸಿಕೊಂಡಿದ್ದರು. ಇದನ್ನು ಕಂಡ ಎಸ್ಪಿ ರಿಷ್ಯಂತ್ ಅವರು ತಕ್ಷಣವೇ ಪೊಲೀಸ್ ಸಿಬ್ಬಂದಿಗಳ ಮೂಲಕ ಪತ್ರಕರ್ತರಾದ ಹಾಲಸ್ವಾಮಿ ಅವರನ್ನು ಬಲವಂತವಾಗಿ ಹಿಡಿದು ಎಳೆದೊಯ್ದು ಪೊಲೀಸ್ ವಾಹನದಲ್ಲಿ ಕೂಡಿ ಹಾಕಿದ್ದಲ್ಲದೆ, ಮೊಬೈಲ್ ಕಿತ್ತುಕೊಂಡು ಅದರಲ್ಲಿದ್ದ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ.
ಪತ್ರಕರ್ತರಾದ ಆರ್.ಎಸ್. ಹಾಲಸ್ವಾಮಿ ಅವರು ತಾನೊಬ್ಬ ಪತ್ರಕರ್ತ ಎಂದೂ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾಡಳಿತ ನೀಡಿದ ಗುರುತಿನ ಚೀಟಿ ಧರಿಸಿದ್ದರೂ ಅದ್ಯಾವುದನ್ನು ಮಾನ್ಯ ಮಾಡದೆ ದಾವಣೆಗೆರೆ ಎಸ್ಪಿ ಅತಿರೇಕದಿಂದ ವರ್ತಿಸಿದ್ದಾರೆ. ಅಸಭ್ಯ ಮಾತಿಗಳಿಂದ ಅವಮಾನಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಪತ್ರಕರ್ತ ಹಾಲಸ್ವಾಮಿ ಅವರನ್ನು ವಾಹನದಲ್ಲಿ ಅಕ್ರಮವಾಗಿ ಕೂಡಿಟ್ಟು ಗಂಭೀರ ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಮೊಬೈಲ್ನಲ್ಲಿದ್ದ ಎಲ್ಲಾ ವೀಡಿಯೋಗಳನ್ನು ಡಿಲಿಟ್ ಮಾಡಿಸಿ ಬಿಟ್ಟು ಕಳುಹಿಸಿದ್ದಾರೆ.
ದಾವಣಗೆರೆ ಎಸ್ಪಿಯ ಈ ವರ್ತನೆ ಅಘಾತಕಾರಿಯದದು, ಸ್ಥಳದ ಸನ್ನಿವೇಶವನ್ನು ಅಹಂಕಾರ ಪ್ರದರ್ಶಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅವರಲ್ಲಿನ ಧೋರಣೆ ಅಪಾಯಕಾರಿಯಾಗಿ ಕಂಡು ಬರುತ್ತಿದೆ.ಟಿವಿ ಭಾರತ್ ಸಂಪಾದಕರಾದ ಆರ್.ಎಸ್. ಹಾಲಸ್ವಾಮಿ ಅವರು ಕಳೆದ 25 ವರ್ಷಗಳಿಂದ ಕರ್ನಾಟಕದ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ. ಅಪಾರವಾದ ಅನುಭವ, ಎಂತಹುದ್ದೇ ಪರಿಸ್ಥಿತಿಯಲ್ಲಿ ಹೇಗೆ ತನ್ನ ಕಾರ್ಯನಿರ್ವಹಿಸಬೇಕೆಂಬ ಅರಿವು ಅವರಗಿದೆ. ಇಂತಹ ಪತ್ರಕರ್ತರನ್ನು ಅಕ್ರಮವಾಗಿ ಕೂಡಿಟ್ಟು, ಅವಮಾನಿಸಿ ಪತ್ರಕರ್ತನ ಕೆಲಸಕ್ಕೆ ಅಡ್ಡಿಪಡಿಸಿರುವ ದಾವಣಗೆರೆ ಎಸ್ಪಿ ರಿಷ್ಯಂತ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಪತ್ರಕರ್ತ ಹಾಲಸ್ವಾಮಿ ಅವರಲ್ಲಿ ಎಸ್ಪಿ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಪತ್ರಕರ್ತರುಗಳಾದ ರಿ ರಾ ರವಿಶಂಕರ್ , ಚಿದಾನಂದ ಸ್ವಾಮಿ ,ಸೆಬಾಸ್ಟಿಯನ್ ಮ್ಯಾಥ್ಯೂಸ್ ,ರಫ಼ಿ ರಿಪ್ಪನ್‌ಪೇಟೆ , ಮತ್ತು ದೇವರಾಜ್ ಆರಗ ಉಪಸ್ಥಿತರಿದ್ದರು.