ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಕಾವು ಹೆಚ್ಚುತಿದ್ದು ಎಲ್ಲಾ ಪಕ್ಷಗಳು 224 ಕ್ಷೇತ್ರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳ ಆಯ್ಕೆ ಮಾಡಿ ರಾಜ್ಯದ ಗದ್ದುಗೆ ಏರುವ ಉತ್ಸಾಹದಲ್ಲಿದೆ.
ಇಂದು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ 300 ಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ಬೆಂಗಳೂರಿಗೆ ದೌಡಾಯಿಸಿದ್ದು ಸಿದ್ದರಾಮಯ್ಯ ,ಪರಮೇಶ್ವರ್ ಮತ್ತು ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ರವರನ್ನು ಭೇಟಿಯಾಗಿ ಬೇಳೂರು ಗೋಪಾಲಕೃಷ್ಣ ರವರಿಗೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಒತ್ತಾಯಿಸಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಕೈ ನಾಯಕರು ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕ್ಷೆ ಆಧಾರದಲ್ಲಿ ಬೇಳೂರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇಂದು ರಾತ್ರಿ ಡಿ ಕೆ ಶಿವಕುಮಾರ್ ಸಾಗರ ಕ್ಷೇತ್ರದಿಂದ ತೆರಳಿದ್ದ ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿ ಟಿಕೆಟ್ ಕೊಡುವ ಜವಬ್ದಾರಿ ನಮಗೆ ಬಿಡಿ ಎಂದು ಸ್ಪಷ್ಟವಾಗಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಬೇಳೂರಿಗೆ ಟಿಕೆಟ್ ತಪ್ಪಿಸಲು ರಣತಂತ್ರ ಹೆಣೆಯುತ್ತಿರುವ ಮುಖಂಡರು
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಹರತಾಳು ಹಾಲಪ್ಪ ರವರ ಹೆಸರು ಫೈನಲ್ ಆಗಿದ್ದು ಘೋಷಣೆಯೊಂದೇ ಬಾಕಿ ಎನ್ನಲಾಗುತ್ತಿದೆ.ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೆಸರು ಸಂಭವನೀಯ ಪಟ್ಟಿಯಲ್ಲಿದ್ದು ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ.
ಆದರೆ ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ಮುಖಂಡರು ಬೇಳೂರು ಗೋಪಾಲಕೃಷ್ಣ ರವರಿಗೆ ಟಿಕೆಟ್ ತಪ್ಪಿಸಲೇ ಬೇಕೆಂಬ ಜಿದ್ದಿಗೆ ಬಿದ್ದಂತೆ ಒಂದು ಸಭೆ ಕೂಡ ನಡೆಸಿದ್ದಾರೆನ್ನಲಾಗುತಿದ್ದು ಕ್ಷೇತ್ರದ ಜಿಪಂ ಮಾಜಿ ಅಧ್ಯಕ್ಷರು, ಜಿಪಂ ಮಾಜಿ ಸದಸ್ಯರು,ಹಾಗೂ ಮುಖಂಡರು ಸಭೆ ನಡೆಸಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುತ್ಸದಿ ನಾಯಕರ ಮುಂದೆ ಅಹವಾಲು ಸಲ್ಲಿಸಿ ಅವರಿಂದ ರಾಜ್ಯಾಧ್ಯಕ್ಷರಿಗೆ ಕರೆಮಾಡಿಸಿ ಟಿಕೆಟ್ ಘೋಷಣೆ ತಡೆ ಹಿಡಿಯುವಂತೆ ಹೇಳಿಸಿದ್ದಾರೆ ಎನ್ನಲಾಗುತಿದ್ದು ಇನ್ನೂ ಮುಂದುವರಿದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕಡೆಯಿಂದ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ.
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷದಿಂದ ಪಕ್ಷ ಸಂಘಟನೆಯ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಳ್ಳದ ನಾಯಕರು ಚುನಾವಣಾ ಸಂಧರ್ಭದಲ್ಲಿ ಪಕ್ಷದ ನಾಯಕರ ಸೋಗಿನಲ್ಲಿ ಬಂದು ವಿರೋಧ ಪಕ್ಷಕ್ಕೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಾರೆ ಎಂದು ಕಾರ್ಯಕರ್ತರು ಸಿದ್ದರಾಮಯ್ಯ ಮತ್ತು ಡಿಕೆಶಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.