ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯ ಶವವನ್ನು ಕೂರಿಸಿಕೊಂಡು ಬಂದು ಊರಿನ ಸರ್ಕಲ್ ನಲ್ಲಿ ಮಲಗಿಸಿ ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಮುತ್ತಳ್ಳಿ ಗ್ರಾಮದಲ್ಲಿ ನಡೆದಿದೆ.ಇದು ಕೊಲೆ ಎಂದು ಕುಟುಂಬ ಆರೋಪಿಸಿದೆ.
ಘಟನೆಯ ಹಿನ್ನಲೆ :
ಶಿರಾಳಕೊಪ್ಪ ಪೊಲೀಸ್ ಠಾಣೆಯ ಮುತ್ತಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಸೋಮಪ್ಪ(30) ಈತನಿಗೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗಂಗಮ್ಮ ಎಂಬ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯೇ ಕರೆಯಿಸಿ ಸೋಮಪ್ಪನನ್ನ ಕೊಲೆ ಮಾಡಿ ಕಳುಹಿಸಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ.
ಸೋಮಪ್ಪ ಈ ಹಿಂದೆ ಕೆಲಸದ ಮೇಲೆ ಹಿರೇಕೆರೂರಿಗೆ ಹೋದಾಗ ಗಂಗಮ್ಮ ಪರಿಚಯವಾಗಿದ್ದಳು. ಈ ಪರಿಚಯ ದೈಹಿಕ ಸಂಬಂಧ ಬೆಳೆಯಲು ದಾರಿ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. ಹಾಗಂತ ಸೋಮಪ್ಪನಿಗೆ ಮದುವೆಯಾಗಿ ಮಗಳಿದ್ದಾಳೆ. ಆದರೆ ಪತ್ನಿಯಿಂದ ದೂರವಾಗಿ ಬದುಕಲು ಆರಂಭಿಸಿ ಬಹಳ ದಿನಗಳೇ ಕಳೆದಿವೆ.
ನಿನ್ನೆ ಹಿರೇಕೆರೂರಿಗೆ ಕರೆಯಿಸಿ ಥಳಿಸಲಾಗಿದೆ. ಥಳಿತಕ್ಕೆ ಸೋಮಪ್ಪ ಜೀವ ಬಿಟ್ಟಿದ್ದಾನೆ. ಆತನನ್ನ ಬೈಕ್ ಮೇಲೆ ಕೂರಿಸಿಕೊಂಡು ಬಂದು ಇಂದು ಬೆಳಿಗ್ಗೆ ಮುತ್ತಳ್ಳಿ ಗ್ರಾಮದ ವೃತ್ತದ ಬಳಿ ಮಲಗಿಸಿ ಹೋಗಿದ್ದಾರೆ. ಸೋಮಪ್ಪನ ಮೇಲೆ ಸಾಕಷ್ಟು ಗಾಯಗಳಾಗಿವೆ. ಆತನ ಮೇಲೆ ತುಂಡು ಬಟ್ಟೆ ಬಿಟ್ಟರೆ ಬೇರೆ ಏನು ಇರಲಿಲ್ಲವೆಂದು ಕುಟುಂಬ ಆರೋಪಿಸಿದೆ.
ಬೈಕ್ ಮೇಲೆಕೂರಿಸಿಕೊಂಡು ಬಂದವರನ್ನ ಚಾಟಿಕೊಪ್ಪದ ರಮೇಶ್, ಸುದೀಪ್ ಮತ್ತು ಗಂಗಮ್ಮನ ಮಗ ನಾಗರಾಜ್ ಎಂದು ಗುರುತಿಸಲಾಗಿದೆ. ಇವರೇ ಸೇರಿಕೊಂಡು ಕೊಲೆ ಮಾಡಿರುವುದಾಗಿ ಮೃತನ ತಂದೆ ಚಂದ್ರಪ್ಪ, ತಾಯಿ ಶಿವನಾಗಮ್ಮ ಮತ್ತು ಜೀವಪ್ಪ ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ.
ಈ ಪ್ರಕರಣ ಹಿರೇಕೆರೂರುನಲ್ಲಿ ನಡೆದಿದ್ದು ಶಿರಾಳಕೊಪ್ಪ ಠಾಣಾ ವ್ಯಾಪ್ತಿಯ ಮುತ್ತಳ್ಳಿಯಲ್ಲಿ ಸೋಮಪ್ಪನ ಮೃತದೇಹವನ್ನ ಬಿಟ್ಟುಹೋಗಿರುವುದರಿಂದ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ.
ಆರೋಪಿಗಳ ಮೊಬೈಲ್ ಗಳು ಸ್ವಿಚ್ ಆಫ್ ಆಗಿದೆ. ಇವರ ಪತ್ತೆಗಾಗಿ ಖಾಕಿಪಡೆ ಭರ್ಜರಿ ಬಲೆ ಬೀಸಿದೆ. ಪೊಲೀಸ್ ತನಿಖೆಯಿಂದ ಕೊಲೆಗೆ ಕಾರಣವೇನು ಎಂಬುದು ತಿಳಿದು ಬರಲಿದೆ.