ರಿಪ್ಪನ್‌ಪೇಟೆ : ಸಕಲ ಸರ್ಕಾರಿ ಗೌರವದೊಂದಿಗೆ ಅಗಲಿದ ಯೋಧ ಸಂದೀಪ್ ರವರ ಅಂತ್ಯಕ್ರಿಯೆ ಪಟ್ಟಣದ ಹಿಂದೂ ರುಧ್ರಭೂಮಿಯಲ್ಲಿ ಜರುಗಿತು.
ಸಂದೀಪ್ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಶಾಸಕ ಹರತಾಳು ಹಾಲಪ್ಪ ,ಸಾಗರ ಉಪವಿಭಾಗಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಧರ್ಮಂತ ಗಂಗಾರಾಮ ಕೋರಿ,ಡಿವೈಸ್ಪಿ ಗಜಾನನ ವಾಮನ ಸುತಾರ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
ವಿನಾಯಕ ವೃತ್ತದಲ್ಲಿ ಶಿವಮೊಗ್ಗ ಜಿಲಾ ಪೊಲೀಸ್ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.
ವಿನಾಯಕ ವೃತ್ತದಲ್ಲಿ ಕೆಲ ಕಾಲ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.ಜನರು ಸರತಿ ಸಾಲಿನಲ್ಲಿ ನಿಂತು ಯೋಧ ಸಂದೀಪ್ ಗೆ ಅಂತಿಮ ನಮನ ಸಲ್ಲಿಸಿದರು.
ನಂತರ ಮೆರವಣಿಗೆ ಮೂಲಕ ತೀರ್ಥಹಳ್ಳಿ ರಸ್ತೆಯ ಗಾಂಧಿನಗರದ ಹಿಂದೂ ರುಧ್ರಭೂಮಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಯಿತು ಈ ಸಂಧರ್ಭದಲ್ಲಿ ಪಟ್ಟಣದ ರಸ್ತೆ ಬದಿಗಳಲ್ಲಿ ಮತ್ತು ಮನೆಗಳ ಮಾಳಿಗೆಗಳ ಮೇಲೆ ನಿಂತಿದ್ದ ಜನರು ಹಾಗೂ ನೆರೆದ ಅಪಾರ ಜನಸ್ತೋಮ ಯೋಧನ ನಿಧನಕ್ಕೆ ಕಂಬನಿ ಮಿಡಿಯಿತು.
ನಂತರ ಧಾರ್ಮಿಕ ಸಂಪ್ರದಾಯದಂತೆ ಸಾವಿರಾರು ಜನರ ಸಮ್ಮುಖದಲ್ಲಿ ಹುತಾತ್ಮ ಯೋಧ ಸಂದೀಪ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಕೆಚ್ಚಿನಿಂದ ಹಟಕ್ಕೆ ಬಿದ್ದು ಸೈನ್ಯಕ್ಕೆ ಸೇರಿದ ಅಪ್ರತಿಮ ದೇಶಭಕ್ತ ಯೋಧ ತವರಿನ ಮಣ್ಣಲ್ಲಿ ಲೀನವಾದರು.