ನಾನು ಸಕ್ರೀಯ ರಾಜಕಾರಣದಿಂದ ನಿವೃತ್ತಿಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಅಧಿವೇಶನದಲ್ಲಿ ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದೆ. ಹಾಗೆಂದರೆ ರಾಜಕಾರಣದಿಂದ ದೂರ ಉಳಿಯುವುದಲ್ಲ. ರಾಜಕಾರಣದಲ್ಲಿ ಇದ್ದುಕೊಂಡೇ ಪಕ್ಷ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಇದರ ಬಗ್ಗೆ ಯಾವುದೇ ಸಂಶಯವಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ.ವಿದಾಯದ ಬಳಿಕ ಕೆಲವರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿರುವ ವಿಚಾರದ ಬಗ್ಗೆ ಮಾತನಾಡಿದ ಬಿಎಸ್ ವೈ ನನಗೆ 70 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ನಾನು ಮಾಡಿದ್ದೇನೆ ಎಂದರು.
ಮತ್ತೊಬ್ಬರಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಈ ತೀರ್ಮಾನ ಮಾಡಿದ್ದೇನೆ. ಇದು ಹೊರತುಪಡಿಸಿದರೆ, ಬೇರೆನೂ ಕಾರಣವಿಲ್ಲ. ನಾನು ಚುನಾವಣೆ ನಿಲ್ಲದೇ ಇರಬಹುದು.ಆದರೆ, ನಾನು ಸಕ್ರೀಯ ರಾಜಕಾರಣದಲ್ಲಿದ್ದು, ಪಕ್ಷವನ್ನು ಅಧಿಕಾರದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆಗೆ ನಿಲ್ಲಬೇಕೆಂದು ಬಿಜೆಪಿಯವರು ಮಠಾಧೀಶರನ್ನು ಭೇಟಿಯಾಗಿದ್ದಾರೆಂಬ ವಿಚಾರದ ಬಗ್ಗೆಯೂ ಉತ್ತರಿಸಿದ ಬಿಎಸ್ ವೈ ನಾನು ಯಾವ ಮಠಾಧೀಶರನ್ನು ಈ ಹಿನ್ನೆಲೆಯಲ್ಲಿ ಭೇಟಿಯಾಗಿಲ್ಲ. ಮಠಾಧೀಶರನ್ನು ಚುನಾವಣೆಗೆ ನಿಲ್ಲಲು ನಾನು ಯಾರ ಬಳಿಯೂ ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಡಿದ್ದು ಸೋಮವಾರ ಉದ್ಘಾಟನೆಗೊಳ್ಳುತ್ತಿರುವ ಶಿವಮೊಗ್ಗ ಏರ್ ಪೋರ್ಟ್ ಗೆ ಪ್ರಧಾನಿ ಮೋದಿಯವರು ಲೋಕಾರ್ಪಣೆ ಮಾಡುತ್ತಿರುವುದು ಖುಷಿ ತಂದಿದೆ. 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಎಲ್ಲರೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಂತಿ ರೀತಿಯಲ್ಲಿ ಭಾಗಿಯಾಗಿ ಎಂದು ಜನತೆಯಲ್ಲಿ ಮವಿ ಮಾಡಿದರು.