ಕುಖ್ಯಾತ ಕ್ರಿಮಿನಲ್ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಮನೆಗೆ ಸಾವಿರಾರು ಜನ ಬಂದು ಹೋಗುತ್ತಾರೆ. ಎಲ್ಲರ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೋಡಿ ಒಳಗೆ ಬಿಡಲಾಗುವುದಿಲ್ಲ. ಹೀಗಿರುವಾಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಹುಟ್ಟಿಸುತ್ತಿರುವುದು ಅವರ ಘನತೆಗೆ ತಕ್ಕುದಲ್ಲ. ರವಿಯ ಜತೆಗೆ ನನಗೆ ಸಂಪರ್ಕ ಇದ್ದರೆ. ಅವನನ್ನು ಬಂಧಿಸದಂತೆ ತಡೆಯುವುದು ದೊಡ್ಡ ವಿಚಾರವಾಗಿರಲಿಲ್ಲ. ಅಂಥವನ ಹತ್ತಿರ ದುಡ್ಡು ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಬಂಟರ ಭವನದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊಸಳ್ಳಿ ಸುಧಾಕರ್ ಮತ್ತು ಅವರ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಗುಜರಾತ್ ಕಾರ್ಯಕ್ರಮ ಆರು ತಿಂಗಳು ಮುಂಚೆ ನಿಗದಿ ಆಗಿತ್ತು. ಅದು ಅಪರಾಧ ವಿಧಿವಿಜ್ಞಾನ ಯೂನಿವರ್ಸಿಟಿ ಶಂಕುಸ್ಥಾಪನೆ ಕಾರ್ಯಕ್ರಮವಾಗಿದೆ. ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದೆ. ಪ್ರತಿ ಕ್ಷಣ ಎಲ್ಲಿಗೆ ಹೋಗಿದ್ದೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇರುತ್ತದೆ ಎಂದು ತಿಳಿಸಿದರು.
ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮಾಹಿತಿ ಇಟ್ಟುಕೊಂಡು ಮಾತಾಡಲಿ. ಅವರೀಗ ತೀರ್ಥಹಳ್ಳಿಯಲ್ಲಿ ಸವೆದುಹೋದ ನಾಣ್ಯವಾಗಿದ್ದಾರೆ. ಅವರ ಪಕ್ಷದ ಕಾರ್ಯಕರ್ತರೇ ಕಿಮ್ಮನೆ ನಾಯಕತ್ವ ಒಪ್ಪದೆ ಬೇಷರತ್ ಆಗಿ ಬಿಜೆಪಿಗೆ ಸೇರುತ್ತಿದ್ದಾರೆ. ಇದರಿಂದ ಕಂಗೆಟ್ಟ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಸಂಬದ್ಧವಾಗಿ ಮಾತನಾಡುವ ಸ್ಥಿತಿ ತಲುಪಿದ್ದಾರೆ ಎಂದರು.
ಹೊಸಳ್ಳಿ ಸುಧಾಕರ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ವೇದಿಕೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆದ್ದೂರ್ ನವೀನ್, ಬೇಗುವಳ್ಳಿ ಸತೀಶ್, ಕಾಸರವಳ್ಳಿ ಶ್ರೀನಿವಾಸ್, ಕವಿರಾಜ್ ಬೇಗುವಳ್ಳಿ, ಚಕ್ಕೊಡಬೈಲು ರಾಘವೇಂದ್ರ ಇನ್ನಿತರರು ಇದ್ದರು.