ಈಡಿಗ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೂಡಲೇ ₹500 ಕೋಟಿ ಅನುದಾನ ಮೀಸಲಿರಿಸು ವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಭಾನು ವಾರ ಶ್ರೀನಾರಾಯಣ ಗುರು ವಿಚಾರ ವೇದಿಕೆಯಿಂದ (ಎಸ್‌ಎನ್‌ಜಿವಿ) ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಯಿತು.
ಸಮಾಜ ಎಷ್ಟೆ ಪ್ರಬಲವಾಗಿದ್ದರೂ ಹೋರಾಟ ನಡೆಸದೆ ಸೌಲಭ್ಯಗಳನ್ನು ಪಡೆಯಲು ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಪ್ರವರ್ಗ 2ಎ ಮೀಸಲಾತಿ ರಕ್ಷಣೆಗಾಗಿ ಈಡಿಗ ಸಮುದಾಯ ಸಂಘಟಿತವಾಗಬೇಕಿದೆ ಎಂದು ನಿಟ್ಟೂರಿನ ನಾರಾಯಣಗುರು ಮಹಾಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
ನಗರದ ಸೈನ್ಸ್ ಮೈದಾನದಲ್ಲಿ ನಾರಾಯಣಗುರು ವಿಚಾರ ವೇದಿಕೆ, ನಾರಾಯಣಗುರು ಸಮಾಜ ಹಿತರಕ್ಷಣಾ ವೇದಿಕೆ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರವರ್ಗ 2ಎ ಮೀಸಲಾತಿ ಸಂರಕ್ಷಣೆ ಹಕ್ಕೊತ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈಡಿಗ ಸಮುದಾಯದಲ್ಲಿ ಸಂಘಟನೆ ಕೊರತೆ ಇದೆ. ಬೇರೆ ಸಮುದಾಯಗಳು ಪ್ರವರ್ಗದ 2ಎ ಮೀಸಲಾತಿ ಕೇಳುತ್ತಿವೆ. ಇದರ ಪರಿಣಾಮದಿಂದ ಹಿಂದುಳಿದ ವರ್ಗದ 102 ಜಾತಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನ ನಡೆಸಲಾಗುತ್ತದೆ ಎಂದಿ ಕಳವಳ ವ್ಯಕ್ತಪಡಿಸಿದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸೌಲಭ್ಯ ಹಾಗೂ ಹಕ್ಕುಗಳಿಗೆ ಹೋರಾಟ ನಡೆಸಿದಾಗ ಮಾತ್ರ ಸರ್ಕಾರ ಅವನ್ನು ನೀಡಲಿದೆ. ಹೀಗಾಗಿ ಹೋರಾಟ ನಿರಂತರವಾಗಿ ನಡೆಯಬೇಕು. ಆ ಮೂಲಕ ಸೌಲಭ್ಯಗಳನ್ನು ಪಡೆಯಬೇಕು. ಅದಕ್ಕೆ ಸಂಘಟನೆ ಅತೀ ಮುಖ್ಯ ಎಂದರು.
ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಹೋರಾಟವು ಬೇರೋಬ್ಬರ ಅನ್ನದ ತಟ್ಟೆಗೆ ಕೈ ಹಾಕಲು ಅಲ್ಲ.ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಿದೆ ಎಂದರು.
ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಎಸ್. ರಾಮಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀಅರುಣಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಶಾಸಕ ಡಾ. ಜಿ..ಡಿನಾರಾಯಣಪ್ಪ, ಪ್ರಮುಖರಾದ ಡಾ.ರಾಜನಂದಿನಿ, ಪ್ರವೀಣ್ ಹಿರೆಇಡಗೋಡು, ಶ್ರೀಧರ್ ಹುಲ್ತಿಕೊಪ್ಪ, ಗೀತಾಂಜಲಿ ದತ್ತಾತ್ರೇಯ, ರಾಘವೇಂದ್ರ ಮುಡಬ, ಕಲಗೋಡು ರತ್ನಾಕರ ಮೊದಲಾದವರು ಇದ್ದರು. ಈಡಿಗರ ಭವನದಿಂದ ಸೈನ್ಸ್ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು.