ರಿಪ್ಪನ್‌ಪೇಟೆ : ಬ್ರಿಟೀಷ್ ಕಾಲದ ರೈಲ್ವೆ ಮಾರ್ಗ ಹೊರತು ಈತನಕ ಶಿವಮೊಗ್ಗದಿಂದ ಯಾವುದೆ ಹೊಸ ಮಾರ್ಗಗಳು ಇರಲಿಲ್ಲ.ಇದೆ ಮೊದಲ ಭಾರಿ ಹೊಸ ರೈಲ್ವೆ ಮಾರ್ಗ ಸಿದ್ಧವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಸಮೀಪದ ಹೊಂಬುಜ ಅತಿಶಯ ಮಹಾಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸ್ವಾತಂತ್ರ್ಯ ಬಂದ ನಂತರ ಶಿವಮೊಗ್ಗದಿಂದ ಯಾವುದೆ ಹೊಸ ಮಾರ್ಗಗಳನ್ನು ಮಾಡಿಲ್ಲ. 2500 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಆನಂದಪುರ – ಶಿಕಾರಿಪುರ – ರಾಣೆಬೆನ್ನೂರು ರೈಲು ಮಾರ್ಗ ಸ್ವಾತಂತ್ರ್ಯ ನಂತರದ ಹೊಸ ರೈಲ್ವೆ ಮಾರ್ಗವಾಗಿದೆ ಎಂದು ತಿಳಿಸಿದರು.
ಅನಂದಪುರ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ಸಂಬಂಧಿಸಿದ ಭೂ ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಪರಿಹಾರದ ಹಣವನ್ನು ತಲುಪಿಸಲಾಗಿದೆ. ಫೆ.27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದರು.
ಇನ್ನು, ದೇಶದಲ್ಲಿ 15 ಕೇಬಲ್ ಕಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಪೈಕಿ ರಾಜ್ಯದ ಎರಡು ಯೋಜನೆಗಳಿವೆ. ಅದರಲ್ಲಿ ಒಂದು ಕೋಡಚಾದ್ರಿಯಿಂದ ಕೊಲ್ಲೂರು ಮಾರ್ಗದ ಕೇಬಲ್ ಕಾರ್ ಯೋಜನೆಯಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.