w
Headlines
Home » ತುಂಗಾ ನದಿಯ ತೀರದಲ್ಲಿ ವಿಜೃಂಭಣೆಯ ತೆಪ್ಪೋತ್ಸವ – ಸಡಗರದ ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಜನ|thirthahalli

ತುಂಗಾ ನದಿಯ ತೀರದಲ್ಲಿ ವಿಜೃಂಭಣೆಯ ತೆಪ್ಪೋತ್ಸವ – ಸಡಗರದ ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಜನ|thirthahalli

ತೀರ್ಥಹಳ್ಳಿ: ತುಂಗಾ ನದಿಯ ದಂಡೆಯ  ಮೇಲಿನಿಂದ ಸಿಡಿದ ಸಿಡಿಮದ್ದುಗಳು ವರ್ಣರಂಜಿತವಾಗಿ ಮುಗಿಲಿಗೆ ಅಪ್ಪಳಿಸಿದವು. ಮರಳು ದಿಬ್ಬದ ಮೇಲೆ ಹಾತೊರೆದು ಕುಳಿತಿದ್ದ ಜನತೆ ಕೇಕೆ ಹಾಕಿದರು.




 ಶ್ರೀ ರಾಮೇಶ್ವರ ಎಳ್ಳಾಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ಭಾನುವಾರ ತುಂಗಾನದಿಯಲ್ಲಿ ದೇವರ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರ ಬಿಂದುವಾಯಿತು. ತೆಪ್ಪೋತ್ಸವಕ್ಕೆ ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು. ತುಂಗಾ ನದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ನದಿಯಲ್ಲಿ ತಿರುಗಿಸಿ ಪೂಜೆ ಸಲ್ಲಿಸಲಾಯಿತು.


 
ಈ ಸಂದರ್ಭದಲ್ಲಿ ತಮಿಳುನಾಡಿನ ಶಿವಕಾಶಿಯ ಪರಿಣಿತರ ತಂಡದಿಂದ ಸಿಡಿಮದ್ದಿನ ಬಣ್ಣದ ಲೋಕವನ್ನೇ ಸೃಷ್ಟಿಸಿದ್ದರು. ನದಿಯ ಇಕ್ಕೆಲಗಳಲ್ಲಿ ಸಾವಿರಾರು ಹಣತೆಗಳು ತೇಲಿದವು. ಮತ್ತೊಂದು ಕಡೆಯಿಂದ ಆಕಾಶ ದೀಪಗಳು ನದಿಯಿಂದ ಗಗನವನ್ನು ಚುಂಬಿಸಿ ನೆರೆದವರ ಮನಸೆಳೆಯಿತು. ಪ್ರಸಿದ್ಧ ಕುರುವಳ್ಳಿಯ ಕಮಾನು ಸೇತುವೆಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಿಡಿಮದ್ದು ಪ್ರದರ್ಶನವನ್ನು ನೋಡಲು ಆಗಮಿಸಿದ ಜನರಿಗೆ ತುಂಗಾ ನದಿ ದಡದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.




  ವಾಹನ ದಟ್ಟಣೆನಿಯಂತ್ರಿಸಲು ಪಟ್ಟಣದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಹಿತಕರ ಘಟನೆ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಪ್ಪೋತ್ಸವ ಸಮಿತಿ, ಪೊಲೀಸ್ ಇಲಾಖೆ ಕೈಗೊಂಡಿತ್ತು. ಕಾಮನು ಸೇತುವೆ ಮತ್ತು ತೆಪ್ಪಕ್ಕೆ ತುಂಗಾ ಕಂಪ್ಯೂಟ್ರಾನಿಕ್ಸ್ ಮಾಲೀಕರಾದ ಅನಿಲ್ ಕುಮಾರ್ ನೇತೃತ್ವದಲ್ಲಿ ಕೋಲ್ಡ್ ಫೈರ್ ಅಳವಡಿಕೆ ಮಾಡಲಾಗಿತ್ತು. ಇದು ತೆಪ್ಪೋತ್ಸವ ನೋಡಲು ಆಗಮಿಸಿದ್ದ ಜನರ ಕಣ್ಮನ ಸೆಳೆಯಿತು.

ಈ ಸಂದರ್ಭದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ ವೈ ರಾಘವೇಂದ್ರ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಶೀಲ ಶೆಟ್ಟಿ, ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.