Headlines

ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಪ್ರವೇಶ ಪಡೆಯಲು ಹೆಲ್ಮೆಟ್ ಕಡ್ಡಾಯಗೊಳಿಸಲಿ : ಬೇಳೂರು ಆರೋಪ

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳು  ಸೇರಿದಂತೆ ಪ್ರತಿಯೊಬ್ಬರು ಶಿರ ಕವಚ (ಹೆಲ್ಮೇಟ್) ಧರಿಸುವುದು ಕಡ್ಡಾಯಗೊಳಿಸಲಿ ಎಂದು ಗೋಪಾಲಕೃಷ್ಣ  ಬೇಳೂರು ಹೇಳಿದರು.

ಅವರು ಇಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿ ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ ಈ ನಿಯಮ ಇನ್ನು ಮುಂದೆ ಈ ಸರ್ಕಾರಿ ಆಸ್ಪತ್ರೆಗೆ ಪ್ರವೇಶ ಪಡೆಯಲು ಕಡ್ಡಾಯ ಮಾಡಬೇಕಾಗಿದೆ ಎಂದರು.


ಸರ್ಕಾರಿ ಆಸ್ಪತ್ರೆ ಕಟ್ಟಡವು ಶಿಥಿಲಗೊಂಡಿದ್ದು ಮೇಲ್ಚಾವಣಿಯ ಸಿಮೆಂಟಿನ  ಗಾರೆ ಸೀಲಿಂಗ್ ಗಳು ಅತಿಯಾದ ಮಳೆಯಿಂದ ಉದುರಿ ಬೀಳುತ್ತಿದ್ದು ಈ ಬಗ್ಗೆ ಸ್ಥಳೀಯ ಶಾಸಕರು ದುರಸ್ತಿ ಕಡೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     
ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಗಳು ಸಹ ಪ್ರತಿನಿತ್ಯ ಜೀವಭಯದಲ್ಲಿ ಕಾರ್ಯನಿರ್ವಹಿಸುವ  ಅನಿವಾರ್ಯತೆ ಎದುರಾಗಿದೆ. ಅವರು ಸಹ ಕವಚ ಧರಿಸಿ ಕರ್ತವ್ಯ ಪಾಲನೆ ಮಾಡಿ, ರೋಗಿಗಳ ಜೀವ ರಕ್ಷಣೆ ಯೊಂದಿಗೆ  ನಿಮ್ಮನ್ನೇ ನೆಚ್ಚಿಕೊಂಡಿರುವ   ಕುಟುಂಬಕ್ಕೆ ನಿಮ್ಮ ಜೀವವೂ ಅಷ್ಟೆ  ಮುಖ್ಯವಾಗಿದೆ ಆ ನಿಟ್ಟಿನಲ್ಲಿ ಜಾಗರೂಕರಾಗಿರಿ ಎಂದರು.


ಇಲ್ಲಿ ಜೀವ ರಕ್ಷಣೆಗೆ ಬರುವ ರೋಗಿಗಳು ಪುನಃ ಮರಳಿ ಮನೆ ಸೇರುತ್ತಾರೆ ಎಂಬ ಖಾತ್ರಿಯೂ ಇಲ್ಲ ಎಂಬ ಆತಂಕ ವ್ಯಕ್ತಪಡಿಸಿದರು .

ಶಾಸಕರ ನಿರ್ಲಕ್ಷ :

ಇದೇ ಮಾರ್ಗದಲ್ಲಿ ಹಲವು ಬಾರಿ ಸಾಗುವ ಶಾಸಕರು ಸರ್ಕಾರಿ ಕಚೇರಿ,  ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ಗಮನ ಹರಿಸದಿರುವುದು ಅವರ ಅಧಿಕಾರದ ಉದ್ಘಟತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.ವೋಟ್ ಬ್ಯಾಂಕಿಗಾಗಿ ಗಿಮಿಕ್ ರಾಜಕಾರಣ ಬಿಟ್ಟು ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಸುಮಾರು 73 ಗ್ರಾಮಗಳು ಈ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ  ಬರಲಿವೆ.ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಸೌಲಭ್ಯಕ್ಕೆ ಗ್ರಾಮೀಣ ಜನರು ಈ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ.

ಈ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನು ತೆರೆಯುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ನಡೆಸಲಾಗಿತ್ತು.ತ್ವರಿತವಾಗಿ ಆಸ್ಪತ್ರೆ ಕಾಮಗಾರಿಗೆ ಒತ್ತು ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
 
ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತ್ ಅಧ್ಯಕ್ಷ ಉಮಾಕರ,  ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ  ಉಬೇದುಲ್ಲಾ ಶರೀಫ್,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಹಂಜಾ,ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಆಸೀಫ಼್ ,ಕೆಂಚನಾಲ ಘಟಕದ ಅಧ್ಯಕ್ಷ ಮಾದಾಪುರ ಮಂಜುನಾಥ್ ,ಕೆರೆಹಳ್ಳಿ ರವೀಂದ್ರ,  ಶ್ರೀನಿವಾಸ್ ಆಚಾರ್ ,ರಾಜುಗೌಡ , ಶ್ರೀಧರ್ ಚಿಗುರು ,ಉಲ್ಲಾಸ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು .

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Leave a Reply

Your email address will not be published. Required fields are marked *