ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಳ್ಯ ತಾಲ್ಲೂಕಿನ ಬೆಳ್ಳಾರೆಯ ಮೃತ ಪ್ರವೀಣ್ ನೆಟ್ಟಾರು, ಮಸೂದ್ ಮತ್ತು ಸುರತ್ಕಲ್‌ನ ಪಾಝಿಲ್ ಮನೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.
ಮೂವರೂ ಮೃತರ ಕುಟುಂಬಗಳಿಗೆ ಜೆಡಿಎಸ್ ಪಕ್ಷದ ವತಿಯಿಂದ ತಲಾ 5 ಲಕ್ಷ ರೂಪಾಯಿ ಧನ ಸಹಾಯದ ಚೆಕ್‌ಗಳನ್ನು ಈ ಸಂದರ್ಭದಲ್ಲಿ ಅವರು ಹಸ್ತಾಂತರ ಮಾಡಿದರು.
ಸೋಮವಾರ ಬೆಳಿಗ್ಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಅವರು, ವಿಮಾನ ನಿಲ್ದಾಣದಿಂದ ನೇರವಾಗಿ ಬೆಳ್ಳಾರೆ ಗ್ರಾಮದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಪ್ರವೀಣ್ ಪತ್ನಿ ನೂತನ ಹಾಗೂ ಅವರ ತಂದೆ-ತಾಯಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ, “ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ನಿಮ್ಮ ಕುಟುಂಬಕ್ಕೆ ನ್ಯಾಯ ಸಿಗುವ ರೀತಿಯಲ್ಲಿ ನಾನು ಹೋರಾಟ ಮಾಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.
“ಆರ್ಥಿಕವಾಗಿ ಅಥವಾ ಯಾವುದೇ ರೀತಿಯ ಸಂಕಷ್ಟ ಎದುರಾದರೂ ನನಗೆ ಕರೆ ಮಾಡಿ. ನಮ್ಮ ಪಕ್ಷವು ನಿಮ್ಮ ನೆರವಿಗೆ ಧಾವಿಸುತ್ತದೆ. ನಿಮ್ಮೊಂದಿಗೆ ನಾನಿದ್ದೇನೆ. ಪ್ರವೀಣ್ ಅವರ ಆತ್ಮಕ್ಕೆ ಶಾಂತಿ ಸಿಗಲು ನಿಮ್ಮ ಮನೆ ಮಗನಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದು ನಾನು ನಿಮ್ಮ ಕುಟುಂಬಕ್ಕೆ ನೀಡುವ ವಚನ” ಎಂದು ಧೈರ್ಯ ತುಂಬಿದ ಕುಮಾರಸ್ವಾಮಿ, ತಮ್ಮ ಮಾಬೈಲ್ ಸಂಖ್ಯೆಯನ್ನು ಪ್ರವೀಣ್ ಪೋಷಕರಿಗೆ ನೀಡಿದರು.
ಮಸೂದ್, ಫಾಝಿಲ್ ಮನೆಗಳಿಗೂ ಭೇಟಿ:
ಬೆಳ್ಳಾರೆಯ ಕಳಂಜದಲ್ಲಿ ಹತ್ಯೆಯಾಗಿದ್ದ ಮತ್ತೊಬ್ಬ ಯುವಕ ಮಸೂದ್ ಅವರ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ ನೀಡಿದರು. ಮಸೂದ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಕುಮಾರಸ್ವಾಮಿ, ಆತನ ಕುಟುಂಬಕ್ಕೂ ಸ್ಥಳದಲ್ಲೇ ಪರಿಹಾರವಾಗಿ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಿದರು.
ಮಸೂದ್ ಮನೆ ಭೇಟಿ ಬಳಿಕ ಸುರತ್ಕಲ್‌ನಲ್ಲಿ ಹತ್ಯೆಯಾದ ಫಾಝಿಲ್ ಮನೆಗೂ ಭೇಟಿ ನೀಡಿದ ಅವರು, ಫಾಝಿಲ್ ತಂದೆ-ತಾಯಿ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅವರಿಗೂ 5 ಲಕ್ಷ ರೂಪಾಯಿ ಮೊತ್ತದ ಚೆಕ್ ನೀಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿ ಎಂ ಫಾರೂಕ್, ಭೋಜೇಗೌಡ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.