ರಿಪ್ಪನ್‌ಪೇಟೆ : ಇಂದು ಪಟ್ಟಣದ ಪೊಲೀಸರು ಬೈಕ್ ಸವಾರರಿಗೆ ಅವಶ್ಯಕ ದಾಖಲೆಗಳ ಬಗ್ಗೆ ವಿನೂತನವಾಗಿ ಚುರುಕು ಮುಟ್ಟಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ತಂಡ ಇಂದು ಪಟ್ಟಣದಲ್ಲಿ ವಾಹನಗಳನ್ನು ತಡೆ ಹಿಡಿದು ಸಾವಿರ ದಂಡ ಕಟ್ಟುವ ಬದಲು ಸಾವಿರ ರೂಪಾಯಿಯಲ್ಲೇ ಇನ್ಸೂರೆನ್ಸ್ ಮಾಡಿಸಿ ಎಂದು ಸವಾರರಿಗೆ ಬುದ್ದಿ ಹೇಳಿ ಸ್ಥಳದಲ್ಲಿಯೇ ಇನ್ಸೂರೆನ್ಸ್ ಹಾಕಿಸಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತ್ತು.
ಪೊಲೀಸರು ವಾಹನ ಅಡ್ಡ ಹಾಕಿದ್ರೆ ಸಾಕು, ಲೈಸೆನ್ಸ್ ಎಲ್ಲಿ, ಆರ್.ಸಿ. ಕೊಡು, ಎಮಿಷನ್ ಮಾಡಿಸಿಲ್ವ, ಇನ್ಸೂರೆನ್ಸ್ ಕಾಪಿ ಎಲ್ಲಿ ಅನ್ನುತ್ತಾರೆ. ಯಾವುದಾದರೊಂದು ದಾಖಲೆ ಇಲ್ಲ ಅಂದ್ರೆ ದಂಡ ಬೀಳುವುದು ಗ್ಯಾರಂಟಿ. ಹಾಗಂತ ಇದರಲ್ಲಿ ಪೊಲೀಸರ ತಪ್ಪೇನಿಲ್ಲ. ವಾಹನ ಓಡಿಸುವ ಸಂದರ್ಭದಲ್ಲಿ ಈ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ಅದರಲ್ಲೂ ವಾಹನಕ್ಕೆ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಇನ್ನೂ ಕಡ್ಡಾಯ. ಯಾವ ಕ್ಷಣದಲ್ಲಿ ಏನೂ ಬೇಕಾದರೂ ಸಂಭವಿಸಬಹುದು ಹಾಗಾಗಿ ಇನ್ಸೂರೆನ್ಸ್ ಬೇಕೇ ಬೇಕು.
ಹಾಗಂತ ಅದೆಷ್ಟು ಮಂದಿ ಇನ್ಸೂರೆನ್ಸ್ ಮಾಡಿಸಿಕೊಂಡಿದ್ದಾರೆ ಹೇಳಿ!!!!. ಕಳೆದ ವರ್ಷ ಇನ್ಸೂರೆನ್ಸ್ ಕಟ್ಟಿದ್ದೇವೆ, ಕೈಯಿಂದ ಕಾಸು ಹೋಯ್ತು ಬಿಟ್ರೆ ಮತ್ತೇನೂ ಆಗಿಲ್ಲ ಅನ್ನುವ ಉಡಾಫೆ ಮಾತು ಆಡುವವರೇ ಹೆಚ್ಚು. ಯಾಕಂದ್ರೆ ಅವರಿಗೆ ಇನ್ಸೂರೆನ್ಸ್ ಬಗ್ಗೆ ಮಾಹಿತಿಯೇ ಇರುವುದಿಲ್ಲ.
ಇಂತಹ ವಾಹನ ಸವಾರರಿಗೆ ಪಾಠ ಕಲಿಸಲು ಮುಂದಾಗಿರುವ ರಿಪ್ಪನ್‌ಪೇಟೆ ಪೊಲೀಸರು ವಿಶಿಷ್ಟ ಇನ್ಸೂರೆನ್ಸ್ ಡ್ರೈವ್ ಒಂದನ್ನು ಪ್ರಾರಂಭಿಸಿದ್ದಾರೆ. ತಪಾಸಣೆ ಸಲುವಾಗಿ ವಾಹನಗಳನ್ನು ಹಿಡಿದಾಗ ಇನ್ಸೂರೆನ್ಸ್ ಇಲ್ಲ ಅನ್ನುವುದು ಗೊತ್ತಾದ್ರೆ ಸ್ಥಳದಲ್ಲೇ ಇನ್ಸೂರೆನ್ಸ್ ಮಾಡಿಸುವುದರ ಮೂಲಕ ಮೋಟಾರು ವಾಹನಗಳ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿರುವುದು ವಿಶೇಷವಾಗಿದೆ.
ಒಟ್ಟಾರೆಯಾಗಿ ರಿಪ್ಪನ್‌ಪೇಟೆ ಪೊಲೀಸರ ಇಂದಿನ ಕಾರ್ಯಾಚರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.