ಸೋಮವಾರ ರಾತ್ರಿ ಶಿವಮೊಗ್ಗ ಜಿಲ್ಲೆ ಸಾಗರ ನಗರದ ಗಣಪತಿ ಕೆರೆಯಲ್ಲಿ ವೈದ್ಯರ ಶವ ಪತ್ತೆಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ಜಂಬಗಾರಿನ ನಿವಾಸಿ ಡಾ. ಶರ್ಮದಾ(36) ಮೃತಪಟ್ಟ ವೈದ್ಯೆಯಾಗಿದ್ದು, ಇವರು ಸೋಮವಾರ ರಾತ್ರಿ ತಮ್ಮ ಕ್ಲಿನಿಕ್ ಬಂದ್ ಮಾಡಿಕೊಂಡು ಬೈಕಿನಲ್ಲಿ ಹೊರಟವರು ರಾತ್ರಿಯಾದರೂ ಮನೆ ತಲುಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಕೆಯ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಗಣಪತಿ ಕೆರೆ ಬಳಿ ಶರ್ಮದಾ ಅವರ ಬೈಕ್ ವಾಹನ ಪತ್ತೆಯಾಗಿತ್ತು. ತಕ್ಷಣ ಕೆರೆಯಲ್ಲಿ ಶೋಧಕಾರ್ಯ ನಡೆಸಿದಾಗ ಶರ್ಮದಾರವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸಂದರ್ಭದಲ್ಲಿ ಈ ವೈದ್ಯರು ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು, ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು
ಶರ್ಮದಾ ಅವರ ವಿವಾಹವು ಭೀಮನಕೊಣೆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿಯಾಗಿರುವ ಸುನೀಲ್ ಎಂಬುವವರ ಜೊತೆ ಕಳೆದ 08 ವರ್ಷಗಳ ಹಿಂದೆ ನೆರವೇರಿತ್ತು. ಶರ್ಮದಾ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
		 
                         
                         
                         
                         
                         
                         
                         
                         
                         
                        
