ರಿಪ್ಪನ್‌ಪೇಟೆ: ಕಳೆದ ಕೆಲವು ತಿಂಗಳುಗಳಿಂದ ಹೆದ್ದಾರಿಪುರ, ಅರಸಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಲಭಾಗದಲ್ಲಿ ತೋಟಗಳಿಗೆ ದಾಳಿಯಿಟ್ಟು ಜನರಿಗೆ ನಿದ್ರೆಗೆಡಿಸಿದ್ದ ಕಾಡಾನೆಗಳು ಈಗ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಉಪಟಳ ನೀಡುತ್ತಿವೆ.
ಸೋಮವಾರ ರಾತ್ರಿ ನರ‍್ಲಿಗೆಯ ರೈತರೊಬ್ಬರ ಬಾಳೆ ತೋಟದಲ್ಲಿ ಪ್ರತ್ಯಕ್ಷವಾದ ಕಾಡಾನೆ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತಿನಲ್ಲಿದ್ದ ವಾಹನದತ್ತ ಕಾಡಾನೆ ಧಾವಿಸಿದ್ದು, ಸಿಬ್ಬಂದಿಗಳು ಬೆದರು ಗುಂಡುಗಳನ್ನು ಹಾರಿಸುವ ಮೂಲಕ ಆನೆಯನ್ನು ಓಡಿಸಿದ್ದಾರೆ. ಬೆದರಿಸಿರುವ ಕಾರಣದಿಂದ ಮುಂದೆ ಸಾಗಿ ಚಾಣಬೈಲು ಗ್ರಾಮದ ದಿನೇಶ್‌ರವರ ತೋಟಕ್ಕೆ ದಾಳಿಯಿಟ್ಟು ಹಲವು ಬಾಳೆ ಮರಗಳನ್ನು ಹಾನಿಗೊಳಿಸಿದೆ. ನಂತರ ಬೆಳಗಿನ ಜಾವ ಹಿರೇಸಾನಿಯ ಗಿಡ್ಡಪ್ಪ ಎಂಬ ರೈತರ ಬಾಳೆ ತೋಟಕ್ಕೆ ನುಗ್ಗಿದೆ. ಆನೆ ಬಂದಿರುವುದನ್ನು ಗಮನಿಸಿ ರೈತ ನೆರೆಹೊರೆಯವರನ್ನು ಕರೆದು ಬೆದರಿಸಿ ಓಡಿಸಿದ್ದಾರೆ.
ಮಂಗಳವಾರ ಬೆಳಿಗ್ಗೆ ಹಿರೇಸಾನಿ ಕಾಡಿನಲ್ಲಿರುವ ಮಾಹಿತಿ ಅರಿತ ಅರಣ್ಯ ಇಲಾಖಾ ಸಿಬ್ಬಂದಿಗಳ ತಂಡ ಕಾರ್ಯಪ್ರವೃತ್ತರಾಗಿ ಕೆಲದೂರ ಆನೆಯನ್ನು ಓಡಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಾಡಾನೆಯನ್ನು ಓಡಿಸಲು ಅರಣ್ಯ ಇಲಾಖೆ ಕ್ರಮಕೈಗೊಂಡಿದ್ದು, ಸಕ್ರೆಬೈಲಿನಿಂದ ಮೂರು ಸಾಕಿದ ಆನೆಗಳನ್ನು ತರಿಸಿಕೊಂಡು ಹಗಲು ರಾತ್ರಿ ಸಿಬ್ಬಂದಿಗಳು ಕಾಡಾನೆಗಳಿಗಾಗಿ ಹೊಂಚುಹಾಕಿ ಕಾಡಿನಲ್ಲಿಯೇ ಕಾದುಕುಳಿತಿದ್ದಾರೆ. ಕಾಡಾನೆಗಳು ಮಾತ್ರ ರಾತ್ರಿ ಸಮಯದಲ್ಲಿ ಕಾಣಿಸಿಕೊಂಡು ಹಗಲಿನಲ್ಲಿ ಇರುವಿಕೆಯ ಸುಳಿವನ್ನು ಬಿಟ್ಟುಕೊಡದೆ ಕಾಡಾನೆ ಮತ್ತು ಅರಣ್ಯ ಇಲಾಖೆಯವರ ನಡುವೆ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇