ಹೊಸನಗರ :- ಮಹಿಳೆ ಎಂದಿಗೂ ಅಬಲೆಯಲ್ಲ ಅವಳು ಸಬಲೆಯಾಗಿದ್ದಾಳೆ, ಸಮಾಜದಲ್ಲಿ ಅವಳಿಗೂ ಸಹಾ ಪುರುಷ ಸಮಾನತೆ ಹಕ್ಕನ್ನು ನೀಡಲು ಹಲವಾರು ವರ್ಷಗಳಿಂದ ಹೋರಾಟ ನಡೆಸಿದ ಪರಿಣಾಮವಾಗಿ ಇಂದು ಪುರುಷ ಸಮಾನಾರ್ತಕ ಹುದ್ದೆಗಳನ್ನು ಅಲಂಕರಿಸಲು ಕಾರಣವಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕೆ.ಪಿ.ಸಿ.ಸಿ ವಕ್ತಾರೆ ಪ್ರಪುಲ್ಲಾ ಮಧುಕರ್ ರವರು ಅಭಿಪ್ರಾಯ ಪಟ್ಟರು.
ಇಂದು ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ಡಿಜಿಟಲ್ ಮಹಿಳಾ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಮಹಿಳೆಯರಿಗೆ ಶೋಷಣೀಯ ಪದ್ಧತಿ ನಡೆಯುತ್ತಿತ್ತು, ಮಹಿಳೆಯು ಸಮಾಜದಲ್ಲಿ ಗುಲಾಮಗಿರಿ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳ ಬೇಕಾಗಿತ್ತು. ಇದನ್ನು ಗಮನಿಸಿ ಎಚ್ಚೆತ್ತು ಕೊಂಡು ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದ ಫಲವಾಗಿ ಇಂದು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಲ್ಲದೇ ಹಲವಾರು ರೀತಿಯಾ ಉದ್ಯೋಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪುರುಷ ಸಮಾನ ಹಕ್ಕನ್ನು ಪಡೆಯುತ್ತಿದ್ದಾಳೆ. ಈ ಕೊಡುಗೆಯು ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಶಿಕ್ಷಣದ ಬಗ್ಗೆ ತಾರತಮ್ಯ ನಡೆಸುವಂತಹಾ ಪ್ರವೃತ್ತಿ ಬೆಳೆಯುತ್ತಿದೆ. ಯಾವುದೇ ಜನಾಂಗದ ಮಹಿಳೆಯು ಶಿಕ್ಷಣವನ್ನು ಪಡೆಯುವುದು ಅವಳ ಹಕ್ಕು. ಇಂತಹ ಹಕ್ಕಿನಿಂದ ಮಹಿಳೆಯರು ವಂಚಿತರಾಗುವ ಸನ್ನಿವೇಶ ಇತ್ತೀಚೆಗೆ ಬಂದೊದಗಿದೆ. ಅನೇಕ ಮಹಿಳೆಯರು ಪಿ.ಯು.ಸಿ ಪರೀಕ್ಷೆಗೆ ಹೋಗದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸರ್ಕಾರವು ಅಧಿಕಾರಕ್ಕೆ ಬಂದಲ್ಲಿ ಸರ್ವ ಧರ್ಮಗಳ ಜನಾಂಗವನ್ನು ಮಾತೃ ರೂಪದಲ್ಲಿದ್ದು ಎಲ್ಲರನ್ನೂ ಸಮಾನಾತ್ಮಕವಾಗಿ ಕಾಣುವಂತಾಗಬೇಕಿದೆ ಎಂದರು.
ಹಿಂದೂ ಧರ್ಮಕ್ಕೆ ಯಾವುದೇ ರೀತಿಯ ಗುತ್ತಿಗೆದಾರರಾಗಲೀ ಏಜೆಂಟರಾಗಲೀ ಇಲ್ಲ, ಹಿಂದೂ ಧರ್ಮಕ್ಕರ ಅದರದ್ದೇ ಆದ ವಿಶೇಷತೆ ಹೊಂದಿದ್ದು, ಈ ಧರ್ಮವು ಆಳವಾಗಿದ್ದು, ಹಿಂದೂ ಧರ್ಮದಲ್ಲಿ ಅಶಾಂತಿ ಸೃಷ್ಟಿಸುವ ಪದ್ಧತಿಗಳಿಲ್ಲ ಬಸವಣ್ಣನವರು ಹೇಳಿದಂತೆ “ದಯೆಯೇ ಧರ್ಮದ ಮೂಲವಯ್ಯ” ಎಂಬಂತೆ ದಯೆಯಿಲ್ಲದ ಧರ್ಮ ಯಾವುದಯ್ಯ ಎನ್ನುವ ರೀತಿ ಹಿಂದುತ್ವದಲ್ಲಿ ಅನ್ಯರಿಗೆ ದಯೆ ತೋರಿಸುವುದೇ ಧ್ಯೇಯವಾಗಿದೆ. ಇದನ್ನು ಅನ್ಯರಿಂದ ಕಲಿಯಬೇಕಾಗಿಲ್ಲ ಎಂದರು.
ಕಳೆದ ಎರಡು ವರ್ಷದಲ್ಲಿ ಕರೋನ ಸಂಕಷ್ಟಕ್ಕೆ ಜಾತಿ ಭೇದವಿಲ್ಲದೇ ಸಾವಿರಾರಕ್ಕೂ ಹೆಚ್ಚು ಜನ ಮೃತರಾದರು. ಕರೋನ ಸಂಕಷ್ಟದಿಂದ ಅನೇಕರು ಒಂದು ಹೊತ್ತು ಊಟಕ್ಕೂ ಪರಿತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದ ಅವರು ಇತ್ತೀಚಿನ ದಿನದ ಶಿಕ್ಷಣ ನೀತಿಯಿಂದ ಅನೇಕ ಮಹಿಳೆಯರು ಹಾಗೂ ಪುರುಷರು, ಯುವಕ, ಯುವತಿಯರು ಶಿಕ್ಷಣ ವಂಚಿತರಾಗುತ್ತಿದ್ದಾರಲ್ಲದೇ ಉದ್ಯೋಗವಿಲ್ಲದೆ ಪರಿತಪ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು ಸರ್ವ ಜನಾಂಗ ಹಾಗೂ ಸರ್ವ ಧರ್ಮಗಳನ್ನೊಳಗೊಂಡ ಜಾತ್ಯಾತೀತ ಪಕ್ಷವಾಗಿದ್ದು ಇಲ್ಲಿ ಯಾರೂ ಮೇಲು ಕೀಳು ಎಂಬ ಭೇದ-ಭಾವಗಳಿಲ್ಲ ಆದ್ದರಿಂದ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ಇದನ್ನು ಎಲ್ಲರಲ್ಲೂ ಮನವರಿಕೆ ಮಾಡುವ ಮೂಲಕ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ನಂತರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನಿತ ಮಾತನಾಡಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಮೀಸಲಾತಿ ನೀಡಿ ಅವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ಯೋಜನೆ ರೂಪಿಸಲಾಗಿದ್ದು ಇದರಿಂದ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ವಾವಲಂಬಿಯ ಬದುಕನ್ನು ನಡೆಸಲು ಮನೆಯಿಂದ ಹೊರ ಬರುವಂತಹ ಕೆಲಸವಾಗಿದೆ.
ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾತಿ ಜಾತಿಗಳಲ್ಲಿ ಧರ್ಮ ಧರ್ಮಗಳಲ್ಲಿ ಒಡಕು ಮೂಡಿಸುವ ಕೆಲಸ ನಡೆಯುತ್ತಿದೆ. ಕೇಸರಿ ಶಾಲೊಂದು ಧಾರ್ಮಿಕ ಸಂಕೇತವಾಗಿದೆ ಎಂದ ಅವರು,ತಾಲ್ಲೂಕಿನ ಪ್ರತೀ ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲಾ ಗ್ರಾಮಗಳಲ್ಲಿಯೂ ಡಿಜಿಟಲ್ ಮಹಿಳಾ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಇದಕ್ಕೆ ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಹೆಚ್ಚಿನ ಅಧಿಕ ಒತ್ತು ನೀಡಿ ಹೆಚ್ಚಿನ ಸದಸ್ಯತ್ವವನ್ನು ನೊಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಪುರಸಭಾ ಸದಸ್ಯ ಅಶ್ವಿನಿ ಕುಮಾರ್, ಮಾಜೀ ತಾಲ್ಲೂಕು ಪಂಚಾಯತ್ ಸದಸ್ಯ ಎರಗಿ ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವ, ಮಹೇಂದ್ರ, ಶೀರಜಾ, ಕಾಂಗ್ರೇಸ್ ಪಕ್ಷದ ಮುಖಂಡರಾದ ಸದಾ ಶಿವ ಶ್ರೇಷ್ಠಿ, ನೇತ್ರಾವತಿ ಸುಬ್ರಾಯ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಪುಷ್ಪಾ ಜಾಧವ್