ಸೊರಬ: ಭಾರಿ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೀರೇಶ್ ಮೇಸ್ತ್ರಿ ಅಧ್ಯಕ್ಷರಾಗಿ ಆಯ್ಕೆಯಾದರು.
ಶುಕ್ರವಾರ ನಡೆದ ಅಧ್ಯಕ್ಷರ ಚುನಾವಣೆಗೆ ಬಿಜೆಪಿಯಿಂದ ವೀರೇಶ್ ಮೇಸ್ತ್ರಿ, ಕಾಂಗ್ರೆಸ್‌ನಿಂದ ಸುಲ್ತಾನಾ ಬೇಗಂ ನಾಮಪತ್ರ ಸಲ್ಲಿಸಿದ್ದರು. ವೀರೇಶ್ ಮೇಸ್ತ್ರಿ 8 ಮತಗಳನ್ನು ಹಾಗೂ ಕಾಂಗ್ರೆಸ್‌ನ ಸುಲ್ತಾನಾ ಬೇಗಂ 4 ಮತಗಳನ್ನು ಪಡೆದರು.
ಅಧ್ಯಕ್ಷರಾಗಿದ್ದ ಎಂ.ಡಿ. ಉಮೇಶ್ ವಿರುದ್ಧ ಸ್ವಪಕ್ಷದ ಸದಸ್ಯರೇ ಸೆ.27ರಂದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇದರಿಂದ ಚುನಾವಣೆ ನಡೆಯಿತು.
ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ 6, ಕಾಂಗ್ರೆಸ್‌ನಿಂದ 4, ಒಬ್ಬರು ಜೆಡಿಎಸ್ ಮತ್ತು ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.
ಮೂಲ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ವೀರೇಶ್ ಮೊದಲ ಅವಧಿಯಲ್ಲಿಯೇ ಪ್ರಥಮ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಕನಸು ಕಂಡಿದ್ದರು. ಆದರೆ ತಮ್ಮ ಆಪ್ತ ಎಂ.ಡಿ. ಉಮೇಶ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವಂತೆ ಮಾಡಲು ಶಾಸಕ ಕುಮಾರ್ ಬಂಗಾರಪ್ಪ ಯಶಸ್ವಿಯಾಗಿದ್ದರು.
ಮೊದಲಿನಿಂದಲೂ ಪುರಸಭೆ ಆಡಳಿತದಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸದಸ್ಯರು ಶಾಸಕರ ಆಪ್ತ ಉಮೇಶ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು.
ವೀರೇಶ್‌ಗೆ ಮೂಲ ಬಿಜೆಪಿ ಮುಖಂಡರ ಬೆಂಬಲ: ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ. ಅವರಿಗಾಗಿ ದುಡಿದ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಮೂಲ ಬಿಜೆಪಿ ಮುಖಂಡರು ವೀರೇಶ್ ಮೇಸ್ತ್ರಿ ಬೆಂಬಲಕ್ಕೆ ನಿಂತು ಜಿಲ್ಲಾ ಮುಖಂಡರ ಮೇಲೆ ಒತ್ತಡ ಹಾಕಿದ್ದರು.
ಶಾಸಕ ಕುಮಾರ್ ಬಂಗಾರಪ್ಪ ವಿರೋಧ ಕಟ್ಟಿಕೊಳ್ಳದ ಜಿಲ್ಲಾ ಮುಖಂಡರು ವೀರೇಶ್ ಮೇಸ್ತ್ರಿ ಅವರನ್ನು ಬೆಂಬಲಿಸಲು ಸಾಧ್ಯವಾಗಿರಲಿಲ್ಲ.
ಉಮೇಶ್ ಅಧ್ಯಕ್ಷರಾಗಿದ್ದಾಗ ದೂರ ಉಳಿದಿದ್ದ ಮೂಲ ಬಿಜೆಪಿ ಮುಖಂಡರು ವೀರೇಶ್ ಮೇಸ್ತ್ರಿ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಅಭಿನಂದನೆ ಸಲ್ಲಿಸಲು ಬಂದಿದ್ದು ವಿಶೇಷ.
ಶಾಸಕ ಕುಮಾರ್ ಬಂಗಾರಪ್ಪ ಇತ್ತ ಸುಳಿಯಲಿಲ್ಲ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಟಿ. ಮೇಘರಾಜ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪಾಣಿ ರಾಜಪ್ಪ, ಕಡಸೂರು ಶಿವಕುಮಾರ್, ಶರಾವತಿರಾವ್, ಶ್ರೀನಾಥ್, ಶಿವರಾಜ್, ವಿಜಯಕುಮಾರ್, ಮಹೇಶ್, ನಿರಂಜನ ಕುಪ್ಪಗಡ್ಡೆ, ಗುರುಪ್ರಸನ್ನಗೌಡ ಇದ್ದರು.