ಕರುಣೆಯಿಲ್ಲದ ಗ್ರಾಮಾಡಳಿತ : 25 ವರ್ಷಗಳಿಂದ ಆಶ್ರಯ ಮನೆಗಾಗಿ ಬಡ ಮಹಿಳೆಯೊಬ್ಬರ ಅಲೆದಾಟ

ಗ್ರಾಮೀಣ ಭಾಗದ ಬಡ ಜನತೆ ಹಾಗೂ ನಿರ್ಗತಿಕರು ತಮ್ಮ ಸ್ವಂತ ವಾಸದ ಮನೆಯಲ್ಲಿ ಬದುಕಲಿ ಎಂಬ ಸದುದ್ದೇಶದಿಂದ ಸರಕಾರ ಆಶ್ರಯ ಯೋಜನೆ ಜಾರಿಗೊಳಿಸಿದ್ದರು ಸಹ ಗ್ರಾಮಾಡಳಿತ ನಿರ್ಲಕ್ಷದಿಂದ ಆಶ್ರಯ ಮನೆಗಾಗಿ ಕಳೆದ 25 ವರ್ಷಗಳಿಂದ ಮಹಿಳೆಯೊಬ್ಬರಿಗೆ ಅಲೆದಾಡಿಸುತ್ತಿದೆ.

ಹುಂಚ ಹೋಬಳಿಯ ಅಳಲೆ ಕೊಪ್ಪ ಗ್ರಾಮದ  ಮಹಿಳೆ ಇಂದಿರಾ ಎಂಬುವರು ಸಾವಿರಾರು ಬಾರಿ ಗ್ರಾಮಪಂಚಾಯತಿಗೆ ಅಲೆದರು ಸಹ ಅಲ್ಲಿನ ಗ್ರಾಮಾಡಳಿತ ಇದುವರೆಗೂ ಬಡ ಮಹಿಳೆಯ ಮೇಲೆ ಯಾಕೋ ಕರುಣೆಯನ್ನು ತೋರಿಸಿಲ್ಲ.

ಸರ್ಕಾರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವುದು ಗ್ರಾಮಾಡಳಿತದ ಜವಾಬ್ದಾರಿ ಆದರೆ ಹುಂಚಾ ಗ್ರಾಮ ಪಂಚಾಯತಿಯಲ್ಲಿ ಈ  ಕಾರ್ಯಾಚರಣೆ ಕುಂಠಿತವಾದಂತೆ ಕಾಣಿಸುತ್ತಿದೆ.


ಇಂದಿರಾರವರು ಅಳಲೆಕೊಪ್ಪ ಗ್ರಾಮದಲ್ಲಿ  ವಿಕಲಚೇತನ ವನ್ನು ಹೊಂದಿರುವ ಪತಿ ಹಾಗೂ ಮಗಳ ಜೊತೆ ಟಾರ್ಪಲಿನ್ ನಿಂದ ನಿರ್ಮಿತವಾದ ಹರಕಲು ಮುರುಕಲು ಗುಡಿಸಿನಲ್ಲಿ ವಾಸಮಾಡುತ್ತಾ  ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಮನೆಗಾಗಿ  ಇಂದು ಬನ್ನಿ ನಾಳೆ ಬನ್ನಿ ಎಂದು ಅಲೆದಾಡಿ ಸುತ್ತಿದ್ದಾರೆ.

ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅಳಲೆಕೊಪ್ಪ ವಾಸಿ ಇಂದಿರಾ ಸುಮಾರು ಇಪ್ಪತೈದು ವರ್ಷಗಳಿಂದ ಆಶ್ರಯ ಯೋಜನೆಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿರುವ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯಾಗಿ ಸರ್ಕಾರದ ಯೋಜನೆಯನ್ನು ನೀಡುವಲ್ಲಿ ಇಲ್ಲಿನ ಗ್ರಾಮ ಪಂಚಾಯತ್ ವಿಫಲವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.



ಗೃಹಮಂತ್ರಿಗಳ ಸಾಮ್ರಾಜ್ಯದಲ್ಲಿಇದೆಂತ ಹೀನಾಯ ಸ್ಥಿತಿ : 

ಸರಳ ಸಜ್ಜನಿಕೆಯ ಮೂಲಕ ರಾಜ್ಯದಲ್ಲಿ ಮತ್ತು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಾಜ್ಯ ಗೃಹ ಮಂತ್ರಿಗಳು ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ರವರ ಸಾಮ್ರಾಜ್ಯದಲ್ಲಿ ಮಹಿಳೆಯೊಬ್ಬರಿಗೆ ಬಂದಿರುವ ಹೀನಾಯ ಸ್ಥಿತಿಯ ಬಗ್ಗೆ ಗ್ರಾಮದ ಜನತೆ ಆಕ್ರೋಶಗೊಂಡಿದ್ದಾರೆ. 

ಇನ್ನಾದರೂ ರಾಜ್ಯದ ಗೃಹ ಮಂತ್ರಿಗಳು ಹಾಗೂ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ  ಆರಗ ಜ್ಞಾನೇಂದ್ರ ರವರು ಕರುಣೆ ತೋರಿಸಬಹುದೇ ಎಂದು ಕಾದುನೋಡಬೇಕು.

 ಮನೆ ನೀಡುತ್ತೇನೆ ಎಂದು ಭರವಸೆ ನೀಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ : 

ಅಳಲೆ ಕೊಪ್ಪ ಗ್ರಾಮದ ಇಂದಿರಾ  ರವರಿಗೆ ಅಲೆದಾಡಿ ಸುತ್ತಿರುವ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಪ್ರಶ್ನೆ ಮಾಡಿದಾಗ ಮಾತನಾಡಿದ ಹುಂಚಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮೇಶ್  ಮುಂಬರುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಇಂದಿರಾರವರಿಗೆ ಆಶ್ರಯ ಮನೆ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ.

ಭರವಸೆ ಕೇವಲ ಭರವಸೆಯಾಗಿ ಉಳಿಯದೇ ಕಾರ್ಯರೂಪಕ್ಕೆ ಬಂದು ಬಡ ಮಹಿಳೆಗೆ ಮನೆ ನಿರ್ಮಾಣವಾಗಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ನ ಆಶಯ

Leave a Reply

Your email address will not be published. Required fields are marked *