Headlines

ಹಣಗೆರೆಕಟ್ಟೆ : ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರಿಂದಲೇ ವಾಹನ ತಪಾಸಣೆ

ತೀರ್ಥಹಳ್ಳಿ : ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನಿಷೇಧಿಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದರೂ ಅದನ್ನು ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ ನೀಡಲು ಬಂದ ಭಕ್ತರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ಕ್ಷೇತ್ರದಲ್ಲಿ ನಡೆದಿದೆ.


ಹಣಗೆರೆಗೆ ರಸ್ತೆಯಲ್ಲಿ ಗ್ರಾಮಸ್ಥರು ತಪಾಸಣೆ ಆರಂಭಿಸಿದ್ದಾರೆ. ಪ್ರತಿ ವಾಹನವನ್ನು ತಡೆದು ಪರಿಶೀಲಿಸುತ್ತಿದ್ದಾರೆ. ವಾಹನದಲ್ಲಿ ಅಡುಗೆ ವಸ್ತುಗಳು, ಕೋಳಿ, ಕುರಿ ಇದ್ದರೆ ಅವುಗಳನ್ನು ವಶಕ್ಕೆ ಪಡೆದು, ಭಕ್ತರನ್ನು ಮಾತ್ರ ದೇವಸ್ಥಾನಕ್ಕೆ ಬಿಡುತ್ತಿದ್ದಾರೆ. ದೇಗುಲಕ್ಕೆ ತೆರಳಿ ಹಿಂತಿರುಗಿದ ಬಳಿಕ ಕೋಳಿ, ಕುರಿ, ಅಡುಗೆ ವಸ್ತುಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಅರಣ್ಯ ವ್ಯಾಪ್ತಿಯಲ್ಲಿ ಅಡುಗೆ ಮಾಡುವುದಕ್ಕೂ ಬಿಡದೆ ಹಿಂದಕ್ಕೆ ಕಳುಹಿಸಲಾಗುತ್ತಿದೆ.
ಗ್ರಾಮಸ್ಥರ ತಪಾಸಣೆ ವೇಳೆ ಕೆಲವರು ಸ್ಥಳೀಯರೊಂದಿಗೆ ಮಾತಿನ ಚಕಮಕಿ ನಡೆಸಿದರು. ಆದರೆ ಇದ್ಯಾವುದಕ್ಕೂ ಬಗ್ಗದ ಸ್ಥಳೀಯರು ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲು ಮಾತ್ರ ಅವಕಾಶ ನೀಡಿದರು. ಗ್ರಾಮಸ್ಥರು ತಪಾಸಣೆ ಆರಂಭಿಸುತ್ತಿದ್ದಂತೆ ಮಾಳೂರು ಠಾಣೆ ಪೊಲೀಸರು ಕೂಡ ಸ್ಥಳಕ್ಕೆ ನೀಡಿ ಪರಿಶೀಲಿಸಿದರು. ಜಗಳಕ್ಕಿಳಿಯುತ್ತಿದ್ದ ಪ್ರವಾಸಿಗರು, ಭಕ್ತರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು.

ಹಣಗೆರೆಕಟ್ಟೆಯಲ್ಲಿರುವ ಶ್ರೀ ಚೌಡೇಶ್ವರಿ ಭೂತರಾಯ ಹಾಗೂ ಸೈಯದ್ ಸಾದತ್ ದರ್ಗಾ ಇರುವ ಧಾರ್ಮಿಕ ಕ್ಷೇತ್ರದಲ್ಲಿ ಆದೇಶ ಉಲ್ಲಂಘನೆಯಾಗಿದ್ದು ಈ ಹಿಂದೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರದಲ್ಲಿ ಕುರಿ – ಕೋಳಿ ಬಲಿ ಕೊಡುವುದನ್ನು ತಹಶೀಲ್ದಾರ್ ನಿಷೇಧ ಮಾಡಿದ್ದರು.

ಇದೀಗ ತಹಶೀಲ್ದಾರ್ ಆದೇಶ ಉಲ್ಲಂಘನೆ ಮಾಡಿ ಭಕ್ತರು ಪ್ರಾಣಿ ಬಲಿ ನೀಡುತ್ತಿದ್ದಾರೆ ಇದರಿಂದ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಅಲ್ಲದೆ ಪ್ರಾಣಿ ಬಲಿ ಕೊಡಲು ಬರುತ್ತಿರುವ ಭಕ್ತರ ವಾಹನಗಳನ್ನು ತಡೆದು ವಾಪಸು ಕಳುಹಿಸಿದ್ದಾರೆ.

ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಹಣಗೆರೆಕಟ್ಟೆ ಕ್ಷೇತ್ರದ 2 ಕಿ.ಮೀ ವ್ಯಾಪ್ತಿಯ ಅರಣ್ಯದಲ್ಲಿ ಈ ರೀತಿಯ ಕೆಲಸ ಮಾಡಲಾಗುತ್ತಿದೆ, ಪ್ರಾಣಿ ಬಲಿ ನೀಡುವವರು ಹಣೆಗೆರೆಕಟ್ಟೆ, ಕೆರೆಹಳ್ಳಿಯ ಅರಣ್ಯ ದೊಳಗೆ ಅಡುಗೆ ಮಾಡುತ್ತಿದ್ದಾರೆ ಇದರಿಂದ ಸ್ಥಳೀಯ ಪರಿಸರ ಹಾಳಾಗುತ್ತಿದೆ ಹಾಗಾಗಿ ಹರಕೆ ತೀರಿಸಿ, ಅರಣ್ಯದೊಳಗೆ ಅಡುಗೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *