ಸಾಗರ : ಇಲ್ಲಿನ ಪಡವಗೋಡು ಗ್ರಾಮ ಪಂಚಾಯತಿಯಲ್ಲಿ ಎರಡು ಬಾರಿ ಅಧ್ಯಕ್ಷರಾಗಿದ್ದ ಹಾಗೂ ಹಾಲಿ ಪಡವಗೋಡು ಗ್ರಾಮ ಪಂಚಾಯಿತಿಯ ಸದಸ್ಯರಾದ ಪಡವಗೋಡು ಬಂಗಾರಪ್ಪ(ಬಂಗಾರಣ್ಣ) ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು.
ಎರಡು ದಿನಗಳ ಹಿಂದೆ ಆರೋಗ್ಯ ತಪಾಸಣೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಆದರೆ ರಕ್ತದೊತ್ತಡ ಹೆಚ್ಚಿರುವ ಕಾರಣ ಅಲ್ಲಿಯೇ ಒಳರೋಗಿಯಾಗಿ ದಾಖಲಾಗಲು ತಿಳಿಸಿದ್ದಾರೆ ತಕ್ಷಣದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲುಮಾಡಲು ಅವರ ಸ್ನೇಹಿತರು ಪ್ರಯತ್ನ ಪಟ್ಟಿರುತ್ತಾರೆ ಆದರೆ ನಿಮಾನ್ಸ್ ನಲ್ಲಿ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಸಿಗುವುದಿಲ್ಲ ಹಾಗಾಗಿ ಬೆಂಗಳೂರಿನ ಸಾಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಅಷ್ಟರಲ್ಲಿ ಸಮಯ ವ್ಯರ್ಥವಾಗಿ ಅವರು ಇಹಲೋಕ ತ್ಯಜಿಸಿದ್ದಾರೆಂದು ತಿಳಿದುಬಂದಿದೆ.
ಇವರ ಅಕಾಲಿಕ ನಿಧನಕ್ಕೆ ಗಣ್ಯರೆಲ್ಲಾ ಸಂತಾಪ ಸೂಚಿಸಿದ್ದಾರೆ.
ಪಡವಗೋಡು ಬಂಗಾರಪ್ಪ ರವರಿಗೆ ನಿಮಾನ್ಸ್ ನಲ್ಲಿ ವೆಂಟಿಲೇಟರ್ ಬೆಡ್ ದೊರೆಯದ ಹಿನ್ನಲೆಯಲ್ಲಿ ವಿಧಾನಸಭಾ ಕಲಾಪದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದ ಶಾಸಕ ಹರತಾಳು ಹಾಲಪ್ಪ…
ಇಂದು ಬೆಳಿಗ್ಗೆ ವಿಧಾನಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಹರತಾಳು ಹಾಲಪ್ಪ ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ ಕುರಿತು ಸದನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ವೆಂಟಿಲೇಟರ್ ಕೊರತೆಯಿಂದ ರಾಜ್ಯದಲ್ಲಿ ಅನೇಕ ಸಾವು ನೋವು ಆಗಿದೆ ಹಾಗೆಯೇ ನನ್ನ ಪತ್ನಿಯ ತಮ್ಮ ಮತ್ತು ಅಕ್ಕ ಕೂಡ ಮರಣಹೊಂದಿದರು.ಈಗ ಸಾಗರದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಡವಗೋಡು ಬಂಗಾರಪ್ಪ ಮೆದುಳು ಸಂಬಂದಿಸಿದ ಕಾಯಿಲೆ ಯಿಂದ ಬಳಲುತಿದ್ದು ಅವರಿಗೆ ಒಂದು ವೆಂಟಿಲೇಟರ್ ಕೊಡಲು ಅರೋಗ್ಯ ಸಚಿವರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಿಮ್ಹಾನ್ಸ್ ಡೈರೆಕ್ಟರ್ ಕರೆಯಿಸಿ ಅಗತ್ಯ ವೆಂಟಿಲೇಟರ್ ವ್ಯವಸ್ಥೆ ಮಾಡಲು ಅರೋಗ್ಯ ಸಚಿವರು ನಿರ್ದೇಶಿಸಬೇಕು ಹಾಗು ರಾಜ್ಯದಲ್ಲಿ ವೆಂಟಿಲೇಟರ್ ಕೊರತೆ ಇರಬಾರದು ಅಗತ್ಯ ಇರುವಷ್ಟು ವೆಂಟಿಲೇಟರ್ ಖರೀದಿಸಬೇಕು ಎಂದು ಆರೋಗ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಆದರೆ ನಿಮಾನ್ಸ್ ನಿಂದ ಸಾಗರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪಡವಗೋಡು ಬಂಗಾರಪ್ಪ ರವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ವರದಿ : ಧರ್ಮರಾಜ್ ಜಿ ಸಾಗರ