ಶಿವಮೊಗ್ಗ ಜಿಲ್ಲೆಯ ಇತಿಹಾಸ ಪ್ರಸಿದ್ಧ ಜೇನುಕಲ್ಲಮ್ಮ ದೇವಿಯ ಜಾತ್ರೆಯು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿ ನೆರವೇರಿತು. ಮಹಾಲಯ ಸಮಯದಲ್ಲಿ ಜರುಗುವ ಹದಿನೈದು ದಿನಗಳ ಜಾತ್ರಾ ಮಹೋತ್ಸವ ಇದಾಗಿದ್ದು, ಕೊರೋನಾ ಕಾರಣದಿಂದ ಜಾತ್ರಾ ಮಹೋತ್ಸವವು ಕಳೆಗುಂದಿತ್ತು.
ಶ್ರೀ ಜೇನುಕಲ್ಲಮ್ಮ ಇರುವುದು ಚಿತ್ತಾಕರ್ಷಕ ಮಲೆನಾಡಿನ ಪ್ರಕೃತಿ ಐಸಿರಿ ನಡುವೆ. ಇಂತಹ ಅಪರೂಪದ ಪ್ರಕೃತಿದತ್ತ ದೇವಸ್ಥಾನವೇ ಶ್ರೀ ಜೇನುಕಲ್ಲಮ್ಮ ಕ್ಷೇತ್ರ.ಹೊಸನಗರ ತಾಲೂಕು ಕೋಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮ್ಮನಘಟ್ಟ ಬೆಟ್ಟವೇ ಜೇನುಕಲ್ಲಮ್ಮ ದೇವಸ್ಥಾನ.
ಮಲೆನಾಡಿನ ತಪ್ಪಲಿನಲ್ಲಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದಲ್ಲಿರುವ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ನಾನಾರೀತಿಯ ಹರಕೆಗಳನ್ನು ಮಾಡಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಅಮ್ಮನಘಟ್ಟ ಗಿಡಮೂಲಿಕೆಗಳ ತವರೂ ಹೌದು. ಈ ವಿಶಿಷ್ಟ ಕ್ಷೇತ್ರದ ಪರಿಚಯವಿದು.ಕಣ್ಣು ಹಾಯಿಸಿದಷ್ಟೂ ಕಾಡಿನ ಮನಮೋಹಕ ನೋಟ, ಪೂರ್ತಿ ಕಲ್ಲುಬಂಡೆಯಿಂದ ಆವೃತವಾದ ದೇವಸ್ಥಾನ, ದೇವಸ್ಥಾನದ ಬಾಗಿಲು ಹೊರತುಪಡಿಸಿ ಇಡೀ ಬಂಡೆಯೇ ದೇವಸ್ಥಾನಕ್ಕೆ ಹೊದಿಕೆ…
ಜೇನು, ಕಲ್ಲು, ಅಮ್ಮ ಎಂಬ ಮೂರು ವಿಭಿನ್ನ ಶಬ್ದಾರ್ಥಗಳ ಸಂಗಮವೇ ಮಹಾಮಾತೆ ಜೇನುಕಲ್ಲಮ್ಮ. ಅಂದರೆ ಕಡಿದಾದ ಕಲ್ಲಿನ ಬೆಟ್ಟ, ಅಲ್ಲಲ್ಲಿ ಕಟ್ಟಿರುವ ಹೆಜ್ಜೇನುಗಳ ಮೊತ್ತ, ಮಧ್ಯೆ ವಿರಾಜಮಾನಳಾಗಿದ್ದಾಳೆ ಅಮ್ಮ. ಅದಕ್ಕೆ ಮಲೆನಾಡ ಜನರ ಬಾಯಲ್ಲಿ ಈಕೆ ಜೇನುಕಲ್ಲಮ್ಮ ಎಂದು ಕರೆಸಿಕೊಂಡಳು.
ದೇವಿಗೆ ಹರಕೆಯಲ್ಲೂ ಅನೇಕ ವೈವಿಧ್ಯತೆಗಳಿವೆ. ಬೆಳ್ಳಿ, ದನಕರು, ಬೆಣ್ಣೆ ಒಪ್ಪಿಸುವುದು, ಉಡಿ ತುಂಬುವುದು – ಹೀಗೆ ವಿವಿಧ ರೀತಿಯಲ್ಲಿ ಭಕ್ತರು ದೇವಿಯ ಸನ್ನಿಧಾನಕ್ಕೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ.
ದೇವಿಗೆ ಹರಕೆ ಮಾಡಿಕೊಂಡರೆ ಅಮ್ಮನ ಆಶೀರ್ವಾದ ಬಲದಿಂದಲೇ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ನವಜೋಡಿ ಜೇನುಕಲ್ಲಮ್ಮನ ದರ್ಶನ ಪಡೆಯುವುದು ಕಡ್ಡಾಯ ನಿಯಮ.
ಎಲ್ಲ ವರ್ಗದ ಜನರೂ ಆಗಮಿಸಿ ಅಮ್ಮನ ದರ್ಶನ ಪಡೆಯುತ್ತಾರೆ.
ದೇವಸ್ಥಾನಕ್ಕೆ ಮೈಲಿಗೆಯಿಂದ ಬಂದರೆ ಹಿಂಭಾಗದ ಬಂಡೆಯಲ್ಲಿ ಗೂಡು ಕಟ್ಟಿಕೊಂಡಿರುವ ಜೇನ್ನೊಣಗಳು ಕಚ್ಚತೊಡಗುತ್ತವೆ ಎಂಬ ಪ್ರತೀತಿ ಇದೆ.
ರೈತರು ಬೆಳೆದ ಭತ್ತ, ಅಡಿಕೆ , ಶುಂಠಿ ಹಾಗೂ ಇನ್ನೂ ಅನೇಕ ರೀತಿಯ ಬೆಳೆಗಳನ್ನು ತಂದು ದೇವಿಗೆ ಅರ್ಪಿಸಿ ಜಾನುವಾರುಗಳನ್ನು ರಕ್ಷಣೆ ಪಡೆಯಲು ದೇವಿಯ ಮೊರೆ ಹೋಗುವುದು ವಾಡಿಕೆಯಾಗಿದೆ.
ದೇವಾಲಯ ಸಮೀಪದ ಗುಹೆಯಲ್ಲಿ ಪರಶುರಾಮ ತಪಸ್ಸು ಮಾಡಿದ,ಜಮದಗ್ನಿ ಒಂದೇ ಬಂಡೆಯ ಕೆಳಗೆ ಕುಳಿತು ದೇವರನ್ನು ಪ್ರಾರ್ಥಿಸಿದ, ಬಂಡೆ_ಸೀಳಿ ಅಮ್ಮ ನೆಲೆಸಿದ್ದಾಳೆಂಬ ನಂಬಿಕೆಗಳಿವೆ.
ಪ್ರತಿವರ್ಷ ಪಿತೃಪಕ್ಷದ ಸಂದರ್ಭದಲ್ಲಿ ಎರಡು ದಿನದಂತೆ ಐದು ವಾರಗಳ ಕಾಲ ನಡೆಯುವ ಜಾತ್ರೆ ಜಿಲ್ಲೆಯಲ್ಲಿ ಇದು ಸುಪ್ರಸಿದ್ಧವಾಗಿದೆ ಮತ್ತು ಶುಕ್ರವಾರ ನಡೆಯುವ ಈ ಜಾತ್ರೆಗೆ ನಾಡಿನಾದ್ಯಂತ ಅನೇಕ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ ಪ್ರಕೃತಿದತ್ತವಾಗಿ ನಿಸರ್ಗದ ಮಡಿಲಿನಲ್ಲಿ ಉದ್ಬವವಾಗಿ ಮೂಡಿರುವ ಈ ದೇವಿಯ ಇತಿಹಾಸ ರೋಚಕವಾಗಿದೆ.