ರಿಪ್ಪನ್ ಪೇಟೆ: ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿ ಸುಮಾರು ಹದಿನೈದು ಲಕ್ಷ ರೂಪಾಯಿ ಅನುದಾನದಲ್ಲಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಸಿದ್ದವಾಗುತ್ತಿದ್ದು ಶೀಘ್ರದಲ್ಲಿ ಅತ್ಯಾಧುನಿಕ ಸುಸಜ್ಜಿತ ಶೌಚಾಲಯ ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗುತ್ತದೆ.ಈ ಹಿಂದೆ ಇದ್ದ ಶಿಥಿಲಗೊಂಡಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ.
ಸುತ್ತಮುತ್ತ ನೂರಾರು ಹಳ್ಳಿಗಳ ಕೇಂದ್ರ ಬಿಂದುವಾಗಿರುವ ರಿಪ್ಪನ್ ಪೇಟೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಹಳೆಯ ಸಾರ್ವಜನಿಕ ಶೌಚಾಲಯ ಪಾಳು ಬಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿದ್ದು ಜೋರಾಗಿ ಮಳೆ ಬಂದರೆ ಬೀಳುವ ಹಂತದಲ್ಲಿತ್ತು.ಹಳೆಯ ಕಟ್ಟಡವನ್ನು ನೆಲಸಮ ಮಾಡುವ ಮೂಲಕ ಮುಂದೆ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ.
ರಿಪ್ಪನ್ ಪೇಟೆಯ ಗ್ರಾಮಾಡಳಿತ ಮತ್ತು ಜನಪ್ರತಿನಿದಿಗಳು ಶೌಚಾಲಯ ನಿರ್ಮಾಣಕ್ಕೆ ಅನುದಾನ ತರಿಸಿದ್ದು. ಶೌಚಾಲಯದ ಕಾರ್ಯ ತ್ವರಿತವಾಗಿ ನಡೆಯುತ್ತಿದೆ.
ಹಳೆಯ ಶೌಚಾಲಯ ಕಟ್ಟಡವನ್ನು ನೆಲಸಮ ಮಾಡಿದ್ದು, ಹೊಸ ಕಟ್ಟಡದ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ನಿರ್ಮಿಸುತ್ತೇವೆ ಎಂದು ಗ್ರಾಮಾಡಳಿತ ಭರವಸೆ ಯನ್ನು ನೀಡಿದೆ.
ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಕೆಲವು ದಿನಗಳ ಹಿಂದೆ ಸಾರ್ವಜನಿಕ ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲದೇ ಶಿಥಿಲಗೊಂಡಿದ್ದು “ಗಬ್ಬು ನಾರುತ್ತಿದೆ ರಿಪ್ಪನ್ ಪೇಟೆಯ ಶೌಚಾಲಯ” ಎಂಬ ಅಡಿ ಬರಹ ದಲ್ಲಿ ಸುದ್ದಿ ಬಿತ್ತರಿಸಿತ್ತು.
ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ಶೌಚಾಲಯವನ್ನು ನಿರ್ಮಿಸಲಿದ್ದು ಜನರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಗ್ರಾಮಾಡಳಿತ ತಿಳಿಸಿದೆ.
ಒಟ್ಟಿನಲ್ಲಿ ರಿಪ್ಪನ್ ಪೇಟೆಯಲ್ಲಿ ಶಿಥಿಲಗೊಂಡಿದ್ದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಮುಂದಾಗುವ ಭಾರಿ ಅನಾಹುತಗಳನ್ನು ತಪ್ಪಿಸಿ ನೂತನ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿರುವ ಗ್ರಾಮಾಡಳಿತದ ಕಾರ್ಯ ವೈಖರಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ವರದಿ : ರಾಮನಾಥ್