Headlines

‘ಕಲ್ಲು ಗಣಿಗಾರಿಕೆಯಲ್ಲಿ ಮೃತಪಟ್ಟವ ನಮ್ಮ ಮಗನಲ್ಲ’: ಅನುಮಾನ ಮೂಡಿಸಿದ ಪೊಲೀಸ್‌ ತನಿಖೆ

ಶಿವಮೊಗ್ಗ: ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಪತ್ತೆಯಾದ ಆರನೇ ಮೃತದೇಹ ಭದ್ರಾವತಿ ಹನುಮಂತ ನಗರದ ಶಶಿ ಅಲಿಯಾಸ್ ದೇವೇಂದ್ರ ಎಂಬುವನದ್ದು ಎಂದು ಎಫ್​​ಎಸ್ಎಲ್ ವರದಿ ನೀಡಿದೆ. ಆದರೆ ಪಾಲಕರು ಮಾತ್ರ ಇದು ನಮ್ಮ ಮಗನದ್ದಲ್ಲ ಎಂದು ಹೇಳುತ್ತಿದ್ದಾರೆ.

ಘಟನೆಯ ಹಿನ್ನೆಲೆ :

ಕಳೆದ ಜನವರಿ 21ರ ರಾತ್ರಿ ನಡೆದ ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ನಡೆದ ಸ್ಫೋಟದಲ್ಲಿ ಆರು ಜನರ ಮೃತದೇಹಗಳು ಪತ್ತೆಯಾಗಿದ್ದವು. ಸ್ಫೋಟ ನಡೆದ ಮೂರ್ನಾಲ್ಕು ದಿನಗಳ ಬಳಿಕ ಐವರ ಮೃತದೇಹಗಳ ಗುರುತು ಪತ್ತೆಯಾಗಿತ್ತು. ಆದ್ರೆ ಆರನೇ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಫ್ಎಸ್ಎಲ್ ಲ್ಯಾಬ್​​​ಗೆ ದೇಹದ ಅಂಗಾಂಗಗಳನ್ನು ಕಳುಹಿಸಲಾಗಿತ್ತು. ಈಗ ಮೃತದೇಹ ಭದ್ರಾವತಿ ಹನುಮಂತ ನಗರದ ಶಶಿ ಅಲಿಯಾಸ್ ದೇವೇಂದ್ರ ಎಂಬುವವರದ್ದು ಎಂದು ಪೊಲೀಸರು ವರದಿ ನೀಡಿದ್ದಾರೆ.

ಆದರೆ ಶಶಿ ಪೋಷಕರು ಮಾತ್ರ ಇದನ್ನು ತಳ್ಳಿ ಹಾಕಿದ್ದಾರೆ. ಡಿಎನ್​ಎ ವರದಿ ಬಂದಿದೆ. ಆರನೇ ಮೃತದೇಹ ನಮ್ಮ ಮಗನದ್ದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಸ್ಫೋಟಗೊಂಡ ಬಳಿಕ ಶಶಿ ತನ್ನ ಸ್ನೇಹಿತರಿಗೆ ಮಾತನಾಡಿದ್ದಾನೆ. ಸತ್ತವನು ಹೇಗೆ ಮಾತನಾಡಲು ಸಾಧ್ಯ? ಎಂದು ಪೋಷಕರು ಪ್ರಶ್ನೆ ಮಾಡಿದ್ದಾರೆ.

ದೇಹದ ಪತ್ತೆಗೆ ನಮಗೆ ಕರೆಸಿದ್ದಾಗ ನಾನು ಮೃತದೇಹ ನಮ್ಮ ಮಗನದ್ದಲ್ಲ ಎಂದರೂ ಸಹ ಪೊಲೀಸರು ಒಪ್ಪದೆ, ನಮ್ಮದೇ ಎಂದು‌ ವಾದಿಸಿದ್ದರು. ಇದೀಗ ಮತ್ತೆ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಮಗನ ಬಳಿ ಎರಡು ಫೋನ್ ನಂಬರ್ ಇತ್ತು. ಈ ಫೋನ್ ನಂಬರ್​​​ಗಳ ಇನ್ ಕಮಿಂಗ್ ಮತ್ತು ಔಟ್ ಗೋಯಿಂಗ್ ಎರಡನ್ನೂ ಪರಿಶೀಲಿಸಿದ್ರೆ ಮಾಹಿತಿ ಸಿಗುತ್ತದೆ. ಆದರೆ ಇದನ್ನು ಪೊಲೀಸರು ಮಾಡುತ್ತಿಲ್ಲ. ಬದುಕಿರುವ ನಮ್ಮ ಮಗನನ್ನು ಪೊಲೀಸರೇ ಸಾಯಿಸುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

Leave a Reply

Your email address will not be published. Required fields are marked *