ರಿಪ್ಪನ್‌ಪೇಟೆ: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಮಾಜಿ ಸಚಿವ, ಎಂಎಸ್ಐಎಲ್ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ರಿಪ್ಪನ್‌ಪೇಟೆ ವೀರಶೈವಲಿಂಗಾಯತ ಸಮಾಜದ ಮುಖಂಡರುಗಳಾದ ಮೆಣಸೆ ಆನಂದ,ಕಮದೂರು ರಾಜಶೇಖರ್, ಹೆಚ್.ಎಸ್.ರವಿ ಹಾಲುಗುಡ್ಡೆ, ನೆವಟೂರು ದೇವೇಂದ್ರಪ್ಪಗೌಡ, ಯೋಗೇಂದ್ರಗೌಡ, ಜಿ.ಡಿ ಮಲ್ಲಿಕಾರ್ಜುನ, ಕಳಸೆ ಗಂಗಾಧರಗೌಡ ಒತ್ತಾಯಿಸಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರುಗಳು ಹಾಲಪ್ಪನವರು ಹೊಸನಗರ-ಸಾಗರ-ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿ ಕಾರ್ಯನಿರ್ವಹಿಸಿದ್ದು ಅಲ್ಲದೆ ಶಾಸಕರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಜಾತಿ ಭೇದ ಭಾವ ಮಾಡದೆ ಸಾಗರ ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯದವರ ಬೇಡಿಕೆಗನುಗುಣವಾಗಿ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಸುಮಾರು 26 ಕೋಟಿ ರೂ. ಅನುದಾನವನ್ನು ಕೊಡಿಸುವುದರೊಂದಿಗೆ ವೀರಶೈವ ಲಿಂಗಾಯಿತರ ಸಮಾಜದ ಕಲ್ಯಾಣ ಮಂದಿರ, ಕೆಂಜಿಗಾಪುರ ವೀರಭದ್ರಸ್ವಾಮಿ ದೇವಸ್ಥಾನದ ಬಳಿಯ ಕಲ್ಯಾಣ ಮಂದಿರ, ಮೂಲೆಗದ್ದೆಮಠ, ಆನಂದಪುರ, ಮುರುಘಾಮಠ ಹೀಗೆ ಹಲವು ಮಠಗಳ ಅಭಿವೃದ್ದಿಕಾಮಗಾರಿಗೆ 9 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಕೊಡಿಸಿದ್ದಾರೆ.
ಈ ಹಿಂದೆ ಶಾಸಕ ಹರತಾಳು ಹಾಲಪ್ಪನವರು ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಅಲ್ಲದೆ ಶಾಸಕರು ಎಂಎಸ್ಐಎಲ್ ಅಧ್ಯಕ್ಷರಾಗಿರುವ ಹರತಾಳು ಹಾಲಪ್ಪನವರಿಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗುವುದೆಂದು ರಾಜ್ಯದ ಬಿಜೆಪಿ ಪಕ್ಷದ ಮುಖಂಡರಿಗೆ ಮತ್ತು ರಾಷ್ಟ್ರೀಯ ನಾಯಕರಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಹರತಾಳು ಹಾಲಪ್ಪನವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಗಳೂರಿಗೆ ನಿಯೋಗ ದೊಂದಿಗೆ ತೆರಳಿ ಪಕ್ಷದ ಹಿರಿಯ ಮುಖಂಡರೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಈ ಸಂಧರ್ಭದಲ್ಲಿ ತಿಳಿಸಿದರು.
ವರದಿ : ಸಬಾಸ್ಟಿನ್ ಮ್ಯಾಥ್ಯೂಸ್ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..