ಹೊಸನಗರ: ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕುಗ್ರಾಮದಲ್ಲಿ ಗ್ರಾಮಸ್ಥರು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಗದ್ದೆಯಂತಾದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆಯನ್ನು ನಡೆಸಿದ ಘಟನೆ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮಪಂಚಾಯತ್ ವ್ಯಾಪ್ತಿಯ ಒಂದಗದ್ದೆ, ನೀರೇರಿ ಎಂಬ ಅವಳಿ ಗ್ರಾಮದಲ್ಲಿ ನಡೆದಿದೆ.
ಒಂದಗದ್ದೆ ಹಾಗೂ ನೀರೇರಿ ಗ್ರಾಮಗಳು ಅವಳಿ ಗ್ರಾಮಗಳಾಗಿವೆ. ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಈ ಮೂಲಭೂತ ಸೌಕರ್ಯಗಳ ಸಮಸ್ಯೆಯು ಇಂದು ನೆನ್ನೆಯದಲ್ಲ ಇದನ್ನು ಇಷ್ಟು ವರ್ಷಗಳಿಂದ ಸಹಿಸಿಕೊಂಡಿದ್ದ ಗ್ರಾಮಸ್ಥರು ಈಗ ಆಕ್ರೋಶದ ಕಟ್ಟೆ ಒಡೆದು ಹೋರಾಟಕ್ಕೆ ಬೀದಿಗೆ ಇಳಿದಿದ್ದಾರೆ.
ಸರಿಯಾದ ಸಂಪರ್ಕ ರಸ್ತೆಯಿಲ್ಲದೆ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಕಡಿವಾಣ ಹಾಕಿದ್ದಾರೆ.ಮಳೆಗಾಲದಲ್ಲಿ ರೋಗಿಗಳು, ವೃದ್ಧರು ಮತ್ತು ಅಶಕ್ತರು ಆಸ್ಪತ್ರೆಗೆ ಹೋಗಬೇಕಾದರೆ ಹರಸಾಹಸ ಪಡುವ ಸನ್ನಿವೇಶ ನಿರ್ಮಾಣವಾಗಿದೆ.ರೋಗಿಗಳನ್ನು ಹೆಗಲ ಮೇಲೆ ಹೊತ್ತು ಹೊಳೆ ದಾಟಿಸುವ ದೃಶ್ಯ ಭ್ರಷ್ಟ ವ್ಯವಸ್ಥೆಯ ಬಗ್ಗೆ ಅಸಹ್ಯ ಹುಟ್ಟಿಸುತ್ತದೆ.
ಸುಮಾರು 50 ರಿಂದ 60 ಮನೆಗಳಿರುವ ಈ ಅವಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಮೂಲಗಳಿಲ್ಲದೆ ಕೆರೆಯ ನೀರನ್ನು ಸೋಸಿ ಕುಡಿಯುವ ಪರಿಸ್ಥಿತಿ ಇದೆ.
ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳಲ್ಲೂ ಹೊಳೆ ಇದ್ದು ಯಾವುದೇ ಸೇತುವೆ ಅಥವಾ ಕಾಲುಸಂಕ ಇಲ್ಲ.ಮಳೆಗಾಲದಲ್ಲಿ ಪಕ್ಕದ ಊರಿನವರೊಂದಿಗೆ ಸಂಪರ್ಕ ಬೆಳೆಸಲು ಸಹ ಇಲ್ಲಿನ ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.
ಒಂದು ಗ್ರಾಮಕ್ಕೆ ಮುಖ್ಯವಾಗಿ ಬೇಕಾದ ಸಂಪರ್ಕ ರಸ್ತೆಯೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಗದ್ದೆಯಂತಾದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಗ್ರಾಮಸ್ಥರು ವಿಭಿನ್ನ ಪ್ರತಿಭಟನೆಯನ್ನು ನಡೆಸಿ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮನೆಯ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಗ್ರಾಮಸ್ಥರಾದ ಮಮತಾ,ಸದಾಶಿವ,ಶ್ರೀಕಾಂತ್ ಶೆಟ್ಟಿ ಮತ್ತು ಅವಿನಾಶ್ ಶೆಟ್ಟಿ ಮಾತನಾಡಿ ಜನಪ್ರತಿನಿಧಿಗಳು ಚುನಾವಣಾ ಸಂಧರ್ಭದಲ್ಲಿ ಮತ ಕೇಳಲು ಬರುತ್ತಾರೆಯೇ ಹೊರತು ನಮ್ಮ ಸಮಸ್ಯೆ ಹೇಳಿದರೆ ಉಡಾಫ಼ೆ ಮಾತನಾಡುತ್ತಾರೆ.ನಮ್ಮ ಊರಿನ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸದೇ ಇದ್ದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದರು.
ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಮಾರುತಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಿದಂಬರ್ ರವರನ್ನು ಮಾತನಾಡಿಸಿದಾಗ ಈಗಾಗಲೇ ಎರಡು ಕಾಲುಸಂಕ ನಿರ್ಮಾಣಕ್ಕೆ 16.00 ಲಕ್ಷ ಅನುದಾನವು ಬಿಡುಗಡೆಯಾಗಿದ್ದು ಅಂದಾಜು ಪಟ್ಟಿ ಸಹ ಸಿದ್ದವಾಗಿದೆ ಮುಂದಿನ ಮಾರ್ಚ್ ಒಳಗೆ ಕಾಲುಸಂಕ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಈ ಭಾಗದಲ್ಲಿ ಮೇಲ್ಬಾಗದಲ್ಲಿಯೇ ಬಂಡೆಯಿದ್ದು ಯಾವುದೇ ಕೊಳವೆ ಬಾವಿ ಕೊರೆಸಲು ಸಾಧ್ಯವಿಲ್ಲ,ಪೈಪ್ ಲೈನ್ ಅಳವಡಿಸಲು ಅರಣ್ಯ ಇಲಾಖೆಯವರು ಸಮ್ಮತಿ ನೀಡುತ್ತಿಲ್ಲ ಈ ಸಮಸ್ಯೆಗೆ ಸರಕಾರದ ಮಟ್ಟದಲ್ಲಿಯೆ ಪರಿಹಾರ ದೊರಕುವಂತೆ ಮಾಡಬೇಕು ಎಂದರು.
ಒಟ್ಟಾರೆಯಾಗಿ ಇಚ್ಚಾಶಕ್ತಿ ಇರುವಂತಹ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದಗದ್ದೆ,ನೀರೇರಿ ಜನರ ಹಲವು ದಶಕದ ಸಮಸ್ಯೆಗೆ ಸ್ಪಂದಿಸಿ ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತಹ ಕೆಲಸ ಮಾಡಬೇಕಾಗಿದೆ.
ವರದಿ : ರಫ಼ಿ ರಿಪ್ಪನ್ ಪೇಟೆ
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..